ಹೊನ್ನಾಳಿ: ತಾಲ್ಲೂಕಿನಾದ್ಯಂತ ಗೌರಿ ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಸಡಗರ ಹಾಗೂ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಯಿತು.
ಹಿಂದೂ ಮಹಾಗೌರಿ ಗಣೇಶ ಸೇವಾ ಸಮಿತಿಯವರು ಪಟ್ಟಣದ ಪೇಟೆ ಹಳದಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಗೌರಿಯನ್ನು ಪ್ರತಿಷ್ಠಾಪಿಸಿ ಸ್ವರ್ಣಗೌರಿ ವ್ರತ ಆಚರಿಸಿದರು. ಬುಧವಾರ ಗಣೇಶನನ್ನು ಮಂಗಳವಾದ್ಯ ಹಾಗೂ ಡೊಳ್ಳುಗಳ ಮೂಲಕ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಪಟ್ಟಣದ ಕೋಟೆ ಬೀದಿ, ನೀಲಕಂಠೇಶ್ವರ ದೇವಸ್ಥಾನ, ದುರ್ಗಿಗುಡಿಯಲ್ಲಿರುವ ದುರ್ಗಮ್ಮ ಹಾಗೂ ಮಾರಮ್ಮ ದೇವಸ್ಥಾನ, ಹಿರೇಕಲ್ಮಠ, ದೊಡ್ಡಕೇರಿ ಬೀರಲಿಂಗೇಶ್ವರ ದೇವಸ್ಥಾನ, ತುಂಗಭದ್ರಾ ಬಡಾವಣೆ ಸೇರಿದಂತೆ ಪಟ್ಟಣದ ಕೆಲವು ಬೀದಿಗಳಲ್ಲಿ ಗಣೇಶೋತ್ಸವದ ಸಡಗರ ಮನೆಮಾಡಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಯಿತು. ಕೆಲವು ಕಡೆ ಪ್ರತಿಷ್ಠಾಪಿಸಿದ ದಿನವೇ ಭವ್ಯ ಮೆರವಣಿಗೆ ಮೂಲಕ ವಿಸರ್ಜನೆಯೂ ನಡೆಯಿತು.
ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಯನ್ನು ಒಂಭತ್ತು, ಹನ್ನೊಂದು ಅಥವಾ 21 ದಿನಗಳವರೆಗೆ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ 220 ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. 1 ಡಿಎಆರ್, 50 ಗೃಹ ರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಸಿಪಿಐ ಸುನೀಲ್‍ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.