ಹೊನ್ನಾಳಿ: ‘ಅನಕ್ಷರಸ್ಥರಿಗೆ ಸ್ವಯಂಸೇವಕರ ಮೂಲಕ ಅಕ್ಷರಜ್ಞಾನವನ್ನುಂಟು ಮಾಡಿ ದೇಶದ ಅನಕ್ಷರತೆಯನ್ನು ಹೋಗಲಾಡಿಸಲು ಸ್ವಯಂಸೇವಕರು ಶ್ರಮಿಸಬೇಕು’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ ಹೇಳಿದರು.
ಮಂಗಳವಾರ ಸರ್ಕಾರಿ ನೌಕರರ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2025ನೇ ಸಾಲಿನಲ್ಲಿ ಎಲ್ಲರಿಗೂ ಶಿಕ್ಷಣ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರ ನವಭಾರತ, ವಯಸ್ಕರ ಶಿಕ್ಷಣ ಎಂಬ ಕಾರ್ಯಕ್ರಮಗಳ ಮೂಲಕ ಅನಕ್ಷರತೆ ಹೋಗಲಾಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ, ಬೇಲಿಮಲ್ಲೂರು, ಹಿರೇಗೋಣಿಗೆರೆ, ಚಿನ್ನಿಕಟ್ಟೆ, ಹನುಮಸಾಗರ ಈ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 124 ಸ್ವಯಂ ಸೇವಕರ ಮೂಲಕ 2,475 ಅನಕ್ಷರಸ್ಥರನ್ನು ಗುರುತಿಸಿದ್ದು, ಅವರನ್ನು ಸಾಕ್ಷರರನ್ನಾಗಿ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಅವರು ಮಾತನಾಡಿ, ‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಕ್ಷರತೆಯನ್ನುಂಟು ಮಾಡಲು ಎಲ್ಲ ರೀತಿಯ ಸಹಕಾರ ಕೊಡಬೇಕು. ಸ್ವಯಂಸೇವಕರಿಗೆ ₹ 2,500 ಗೌರವಧನವನ್ನು ಜಿಲ್ಲಾ ಪಂಚಾಯಿತಿಯಿಂದ ಕೊಡಲಾಗುವುದು. ಒಬ್ಬ ಅನಕ್ಷರಸ್ಥರನ್ನು ಸ್ವಯಂ ಸೇವಕರು ಗುರುತಿಸಿದರೆ ಅವರಿಗೆ ₹ 5 ಸಹಾಯಧನ ನೀಡಲಿದೆ’ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ. ತಿಪ್ಪೇಶಪ್ಪ ಮಾತನಾಡಿ, ‘ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಸಾಕ್ಷರಾಭ್ಯಾಸ ಮಾಡಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ 120ಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿಯಾಗಿದ್ದರು.
ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ. ರಾಮಪ್ಪ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್, ಸೌಮ್ಯಶ್ರೀ, ತಾಲ್ಲೂಕು ವಯಸ್ಕರ ಶಿಕ್ಷಣ ಅಧಿಕಾರಿ (ನೋಡೆಲ್ ಅಧಿಕಾರಿ) ಸುನೀಲ್, ಬಿಆರ್‌ಪಿ ಅರುಣ್‍ಕುಮಾರ್ ಉಪಸ್ಥಿತರಿದ್ದರು. ಬಿಆರ್‌ಪಿ ಮಲ್ಲೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.