ಹೊನ್ನಾಳಿ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿದ್ದ ಕುರಿ ಮಾರುಕಟ್ಟೆಯನ್ನು ತುಂಗಭದ್ರಾ ಬಡಾವಣೆಯಲ್ಲಿ ಪಾರ್ಕ್‌ಗೆ ಮೀಸಲಿಟ್ಟ ಜಾಗಕ್ಕೆ ಬುಧವಾರ ಸ್ಥಳಾಂತರಿಸಲಾಗಿದೆ. ಹೊಸ ಜಾಗಕ್ಕೆ ವ್ಯಾಪಾರಿಗಳು ಹೊಂದಿಕೊಳ್ಳುತ್ತಿದ್ದು, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದಿನ ಕುರಿ ಮಾರುಕಟ್ಟೆ ಜಾಗ ಕಿರಿದಾಗಿದ್ದು, ಸುತ್ತಲಿನ ರಸ್ತೆಗಳಲ್ಲಿ ಜನ ಹಾಗೂ ವಾಹನ ದಟ್ಟಣೆ ಉಂಟಾಗುತ್ತಿತ್ತು. ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಆದರೆ ಮಾರುಕಟ್ಟೆಗೆ ವಿಶಾಲವಾದ ಹಾಗೂ ಪುರಸಭೆಗೆ ಆದಾಯ ತಂದುಕೊಡುವ ಜಾಗ ಸಿಕ್ಕಿರಲಿಲ್ಲ. ಎಪಿಎಂಸಿಗೆ ಕುರಿ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂಬುದಾಗಿ ಕೆಲವರು ಸಲಹೆ ನೀಡಿದ್ದರು. ಆದರೆ ಸುಂಕದ ಆದಾಯ ಎಪಿಎಂಸಿಗೆ ಹೋಗುತ್ತದೆ ಎನ್ನುವ ಕಾರಣದಿಂದ ಅಲ್ಲಿಗೆ ಸ್ಥಳಾಂತರಿಸಲು ಪುರಸಭೆ ತೀರ್ಮಾನ ಕೈಗೊಂಡಿರಲಿಲ್ಲ.
ತುಂಗಭದ್ರಾ ಬಡಾವಣೆಯಲ್ಲಿ ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ಬೃಹತ್ ಗಾತ್ರದ ಮರಗಳು ಬೆಳೆದು ಹಲವು ವರ್ಷಗಳಿಂದ ಕೊಂಪೆಯಂತಾಗಿತ್ತು. ಪುರಸಭೆಯು ಪಾರ್ಕ್ ನಿರ್ಮಾಣಕ್ಕೆ ಮನಸ್ಸು ಮಾಡಿರಲಿಲ್ಲ. ಇತ್ತೀಚೆಗೆ ನಡೆದ ಪುರಸಭೆ ಆಡಳಿತ ಮಂಡಳಿ ಸಭೆಯಲ್ಲಿ ಪಾರ್ಕ್ ಜಾಗವನ್ನು ಕುರಿ ಮಾರುಕಟ್ಟೆಗೆ ಬಳಸಿಕೊಳ್ಳಲು ತೀರ್ಮಾನಿಸಿತ್ತು. ಸಂತೆ ದಿನವಾದ ಬುಧವಾರದಿಂದಲೇ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ತಿಳಿಸಿದರು.
‘ಕುರಿ ವ್ಯಾಪಾರಕ್ಕೆ ವಿಶಾಲವಾದ ಜಾಗ ಸಿಕ್ಕಿದೆ. ಆದರೆ ಇನ್ನೂ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ರಾಣೆಬೆನ್ನೂರಿನ ಕರಿಯಪ್ಪ ಹೇಳಿದ್ದಾರೆ.
ಕುರಿಗಳನ್ನು ಸಾಗಾಟ ಮಾಡುವ ನೂರಾರು ವಾಹನಗಳನ್ನು ನಿಲ್ಲಿಸುವುದಕ್ಕೆ ಸ್ಥಳಾವಕಾಶದ ಸಮಸ್ಯೆಯಾಗುತ್ತದೆ. ವಾಹನ ನಿಲುಗಡೆಗೆ ಸೂಕ್ತ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಹೊಸ ಮಾರುಕಟ್ಟೆಯಲ್ಲಿ ಕೆಲವು ಸಮಸ್ಯೆಗಳಿವೆ. ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಎಲ್ಲ ಸೌಲಭ್ಯಗಳಿದ್ದರೆ ಮಾತ್ರ ಕುರಿ ವ್ಯಾಪಾರಿಗಳು ಸುಂಕ ಕೊಡುತ್ತಾರೆ. ಇಲ್ಲದಿದ್ದರೆ ತಕರಾರು ಮಾಡುತ್ತಾರೆ’ ಎಂದು ಸುಂಕ ವಸೂಲಿ ಮಾಡುವ ವಿಜಯ್ ಹೇಳಿದ್ದಾರೆ.
ಮಾರುಕಟ್ಟೆ ಇದೇ ವಾರ ಸ್ಥಳಾಂತರವಾಗಿದೆ. ಕುಡಿಯುವ ನೀರು ವಾಹನ ಪಾರ್ಕಿಂಗ್ ಸೇರಿದಂತೆ ಎಲ್ಲ ಮೂಲ ಸೌಕರ್ಯ ಹಂತ ಹಂತವಾಗಿ ಒದಗಿಸಲಾಗುವುದು ಮೈಲಪ್ಪ ಪುರಸಭೆ ಅಧ್ಯಕ್ಷ
ಪ್ರತೀ ಬುಧವಾರ ಕುರಿ ಜಾತ್ರೆ ಪ್ರತೀ ಬುಧವಾರ ಹೊನ್ನಾಳಿಯಲ್ಲಿ ನಡೆಯುವ ಕುರಿ ಮಾರುಕಟ್ಟೆಗೆ ಅಂದಾಜು 3ರಿಂದ 4 ಸಾವಿರ ಕುರಿಗಳನ್ನು ಮಾರಾಟಕ್ಕೆ ತರಲಾಗುತ್ತದೆ. ಅಂದಾಜು ಒಂದೂವರೆ ಸಾವಿರ ವ್ಯಾಪಾರಿಗಳು ಈ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಹರಿಹರ ದಾವಣಗೆರೆ ಹಾವೇರಿ ರಾಣೆಬೆನ್ನೂರು ಶಿಕಾರಿಪುರ ಸೇರಿದಂತೆ 50 ಕಿ.ಮೀ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳ ಜನರು ಮಾರುಕಟ್ಟೆಗೆ ಬರುತ್ತಾರೆ. ಬೆಳಿಗ್ಗೆ 6ಕ್ಕೆ ಶುರುವಾಗಿ ಮಧ್ಯಾಹ್ನ 12ರ ಹೊತ್ತಿಗೆ ಬಹುತೇಕ ಮುಕ್ತಾಯಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.