ADVERTISEMENT

ಸೂರು, ನಿವೇಶನ ಹಕ್ಕಿಗೆ ಹೋರಾಟ: ಸಾತಿ ಸುಂದರೇಶ್

ಸಿಪಿಐ ಶತಮಾನೋತ್ಸವ ಜಾಥಾ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:15 IST
Last Updated 18 ಡಿಸೆಂಬರ್ 2025, 5:15 IST
ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿಪಿಐ ಶತಮಾನೋತ್ಸವ ಜಾಥಾವನ್ನು ಬುಧವಾರ ಸ್ವಾಗತಿಸಲಾಯಿತು. ಸಿಪಿಐ ಮುಖಂಡರಾದ ಅವರಗೆರೆ ಚಂದ್ರು, ಸಾತಿ ಸುಂದರೇಶ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿಪಿಐ ಶತಮಾನೋತ್ಸವ ಜಾಥಾವನ್ನು ಬುಧವಾರ ಸ್ವಾಗತಿಸಲಾಯಿತು. ಸಿಪಿಐ ಮುಖಂಡರಾದ ಅವರಗೆರೆ ಚಂದ್ರು, ಸಾತಿ ಸುಂದರೇಶ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಮನೆ, ನಿವೇಶನ ಇಲ್ಲ. ಇಂತಹ ನಿರ್ಗತಿಕರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಫೆಬ್ರುವರಿಯಲ್ಲಿ ವಿಧಾನಸೌಧ ಮುತ್ತಿಗೆಗೆ ತೀರ್ಮಾನಿಸಿದೆ ಎಂದು ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿದರು.

ನಗರಕ್ಕೆ ಆಗಮಿಸಿದ ಸಿಪಿಐ ಶತಮಾನೋತ್ಸವ ಜಾಥಾ ಅಂಗವಾಗಿ ಜಯದೇವ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ನಾವು ಹೊಂಟೆವಾ ಮುಖ್ಯಮಂತ್ರಿ ನೋಡಲಿಕ್ಕಾ, ಸೈಟು–ಮನೆ ಕೇಳಲಿಕ್ಕಾ’ ಎಂಬ ಘೋಷಣೆಯೊಂದಿಗೆ ಫೆಬ್ರುವರಿಯಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ನಿರ್ಗತಿಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು. ಸರ್ಕಾರಿ ಜಮೀನುಗಳಲ್ಲಿ ನಿವೇಶನ ಸೌಲಭ್ಯ ಕಲ್ಪಿಸಿದರೆ ಬಡವರಿಗೆ ಅನುಕೂಲ’ ಎಂದರು.

ADVERTISEMENT

‘ವಸತಿ ಸೌಲಭ್ಯಕ್ಕೆ ರಾಜ್ಯ ಸರ್ಕಾರ ₹ 1.20 ಲಕ್ಷ ಆರ್ಥಿಕ ನೆರವು ನೀಡುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯ ನಡುವೆ ಮನೆ ನಿರ್ಮಿಸಿಕೊಳ್ಳಲು ಈ ಅನುದಾನ ಸಾಕಾಗುತ್ತಿಲ್ಲ. ಕೇರಳದಲ್ಲಿ ₹ 7 ಲಕ್ಷ ಹಾಗೂ ತೆಲಂಗಾಣದಲ್ಲಿ ₹ 5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದರು.

‘ಮಹಾತ್ಮ ಗಾಂಧೀಜಿ ಅವರನ್ನು ಸಹಿಸದ ಆರ್‌ಎಸ್‌ಎಸ್‌ ಅಣತಿಯಂತೆ ಬಿಜೆಪಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಹೆಸರನ್ನು ‘ವಿಬಿ–ಜಿ ರಾಮ್‌ ಜಿ’ ಎಂದು ಬದಲಿಸಲಾಗಿದೆ. ಮುಂದೊಂದು ದಿನ ನೋಟಿನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತ್ರಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಎಚ್.ಜಿ. ಉಮೇಶ್, ಎಚ್.ಎಂ. ಸಂತೋಷ್, ಪಿ. ಷಣ್ಮುಖಸ್ವಾಮಿ, ಜಿ. ಯಲ್ಲಪ್ಪ, ಎಚ್.ಕೆ. ಕೊಟ್ರಪ್ಪ, ಮಾದಿಹಳ್ಳಿ ಮಂಜುನಾಥ್, ಕೆ.ಜಿ. ಶಿವಮೂರ್ತಿ, ಕಲಿಗಾರ ರಫಿವುಲ್ಲಾ, ಐರಣಿ ಚಂದ್ರು ಹಾಜರಿದ್ದರು.

ಸಿಪಿಐ ಮತ್ತು ಆರ್‌ಎಸ್‌ಎಸ್‌ ರೂಪುತಳೆದ ಕಾಲ ಒಂದೇ. ದೇಶದ ಸ್ವಾತಂತ್ರ್ಯಕ್ಕೆ ಸಿಪಿಐ ಹೋರಾಟ ನಡೆಸಿತು. ಈ ಸಂಗ್ರಾಮದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್‌ ಧರ್ಮಗಳ ನಡುವೆ ಕಂದಕ ಸೃಷ್ಟಿಸಿತು
–ಸಾತಿ ಸುಂದರೇಶ್‌, ರಾಜ್ಯ ಕಾರ್ಯದರ್ಶಿ ಸಿಪಿಐ