ADVERTISEMENT

ದಾವಣಗೆರೆ: ಕೊರೊನಾ ಮುಚ್ಚಿಟ್ಟರೆ ಕ್ರಿಮಿನಲ್‌ ಕೇಸ್‌ ಹಾಕಲಿ –ಪ್ರೊ.ಶರಣಪ್ಪ ವಿ.

ಕೋವಿಡ್‌–19 ನಿಂದ ಮುಕ್ತರಾದ ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಎಸ್‌.ವಿ. ಹಲಸೆ ಸಲಹೆ

ಬಾಲಕೃಷ್ಣ ಪಿ.ಎಚ್‌
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ಪ್ರೊ.ಎಸ್.ವಿ ಹಲಸೆ
ಪ್ರೊ.ಎಸ್.ವಿ ಹಲಸೆ   

ದಾವಣಗೆರೆ: ಕೊರೊನಾ ಸೋಂಕು ಬಂದರೆ ಯಾರೂ ಅದನ್ನು ಮುಚ್ಚಿಡಬಾರದು. ಮುಚ್ಚಿಟ್ಟರೆ ಅಂಥವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು.

ಕೊರೊನಾ ವೈರಸ್‌ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರ ಸಲಹೆ ಇದು. ಅವರು ‘ಪ್ರಜಾವಾಣಿ ಜತೆ ಕೊರೊನಾನುಭವ ಬಿಚ್ಚಿಟ್ಟರು.

‘ವಿಶ್ವವಿದ್ಯಾಲಯದ ಘಟಿಕೋತ್ಸವ ಇದ್ದ ಕಾರಣ ಬೆಂಗಳೂರು ಮತ್ತಿತರ ಕಡೆಗಳಿಗೆ ಓಡಾಡಬೇಕಾಯಿತು. ವಿಶ್ವವಿದ್ಯಾಲಯದಲ್ಲಿ ಕೂಡ ಹಲವು ಮಂದಿಯ ಭೇಟಿ ಅನಿವಾರ್ಯವಾಗಿತ್ತು. ಇಂಥ ಸಂದರ್ಭದಲ್ಲಿ ನನಗೆ ಸೋಂಕು ಬಂದಿರಬೇಕು. ಘಟಿಕೋತ್ಸವದ ದಿನವೇ ಅಂದರೆ ಸೆಪ್ಟೆಂಬರ್‌ 30ರಂದು ಸೋಂಕು ಬಂದಿರುವುದು ದೃಢಪಟ್ಟಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗಿಯಾಗದೇ ಆನ್‌ಲೈನ್‌ ಮೂಲಕ ಪಾಲ್ಗೊಳ್ಳಬೇಕಾಯಿತು’ ಎಂದು ವಿವರಿಸಿದರು.

ADVERTISEMENT

‘ನನ್ನ ಪತ್ನಿ ಡಾ. ರಾಣಿ ಚನ್ನಮ್ಮ ಹಲಸೆ ಅವರಿಗೂ ಕೊರೊನಾ ಪಾಸಿಟಿವ್‌ ಬಂತು. ಮಗನಿಗೆ ನೆಗೆಟಿವ್‌ ಬಂತು. ದಾವಣಗೆರೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ ದಾಖಲಾದೆ. ಉತ್ತಮ ಚಿಕಿತ್ಸೆ ನೀಡಿದರು. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದೆ. ಈ ವಾರದ ಅಂತ್ಯಕ್ಕೆ ಹೋಮ್‌ ಕ್ವಾರಂಟೈನ್‌ ಕೂಡ ಮುಗಿಯಲಿದೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿಗೆ ನೇರ ಚಿಕಿತ್ಸೆ ಎಂಬುದಿಲ್ಲ. ಹಾಗಾಗಿಯೇ ಸಮಸ್ಯೆಯಾಗುತ್ತಿದೆ. ಇದು ಭಯಾನಕ ಕಾಯಿಲೆ ಅಲ್ಲದೇ ಇದ್ದರೂ ಎಚ್ಚರ ವಹಿಸದಿದ್ದರೆ ಅಪಾಯ ಉಂಟಾಗುತ್ತದೆ. ಪ್ರತಿಯೊಬ್ಬರಿಗೂ ಬೇರೆ ಏನು ಕಾಯಿಲೆ ಇದೆ ಎಂಬುದನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ’ ಎಂದರು.

‘ಬಹುತೇಕರು ಈ ಕಾಯಿಲೆಯನ್ನು ಮುಚ್ಚಿಡುತ್ತಾರೆ. ನಾನು ಮುಚ್ಚಿಟ್ಟರೆ ನಾನಾ ಕಾರಣಕ್ಕೆ ನನ್ನಲ್ಲಿಗೆ ಸಿಬ್ಬಂದಿ, ಇತರರು ಬರುತ್ತಾರೆ. ಅವರು ಅಮಾಯಕರಾಗಿರುತ್ತಾರೆ. ಗೊತ್ತಿಲ್ಲದೆಯೇ ನನ್ನಿಂದ ಅವರಿಗೆ ಸೋಂಕು ಹರಡುತ್ತದೆ. ನಾನು ಅದಕ್ಕೆ ಸೋಂಕಿದೆ ಎಂಬುದು ಗೊತ್ತಾದ ಕೂಡಲೇ ಎಲ್ಲರಿಂದ ದೂರ ಉಳಿದೆ. ಬಹಳ ಮಂದಿ ಮುಚ್ಚಿಡುತ್ತಿದ್ದಾರೆ. ಮುಚ್ಚಿಡುವವರ ಮೇಲೆ ಪ್ರಕರಣ ದಾಖಲಿಸಬೇಕು. ಅಷ್ಟೇ ಅಲ್ಲ ಅವರನ್ನು ಬಂಧಿಸಬೇಕು. ಆಗ ಬೇರೆಯವರು ಮುಚ್ಚಿಡುವುದು ತಪ್ಪುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಕೊರೊನಾ ಬಗ್ಗೆ ಭಯ ಬೇಡ. ನಿರ್ಲಕ್ಷ್ಯವೂ ಬೇಡ. ಬಂದ ಕೂಡಲೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು. ಆಗ ಹೆಚ್ಚಿನ ಅಪಾಯ ಉಂಟಾಗುವುದಿಲ್ಲ ಎಂಬುದು ಅವರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.