ADVERTISEMENT

ಮಣ್ಣು ಗಣಿಗಾರಿಕೆ: ನದಿ ತೀರಕ್ಕೆ ಪೆಟ್ಟು

ಮನೆಗಳ ಮೇಲೆ ದೂಳಿನ ಹೊದಿಕೆ; ಇಟ್ಟಿಗೆ ಭಟ್ಟಿಗೆ ಮಣ್ಣು ಪೂರೈಸಿ ಬರಿದಾದ ಜಮೀನು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:17 IST
Last Updated 20 ನವೆಂಬರ್ 2025, 7:17 IST
ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ತೀರದ ಪಾಮೇನಹಳ್ಳಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದು
ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ತೀರದ ಪಾಮೇನಹಳ್ಳಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದು   

ಹರಿಹರ: ತಾಲ್ಲೂಕಿನ ಗುತ್ತೂರು ಸೇರಿದಂತೆ ಸಾರಥಿ, ಪಾಮೇನಹಳ್ಳಿ, ಕುರುಬರಹಳ್ಳಿ, ದೀಟೂರು, ರಾಜನಹಳ್ಳಿ ಸುತ್ತಲಿನ ತುಂಗಭದ್ರಾ ನದಿತೀರದ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ ಕೇಳಿಬಂದಿದೆ. 

ಹಗಲು, ರಾತ್ರಿ ಎನ್ನದೆ ದೊಡ್ಡ ಗಾತ್ರದ ಲಾರಿಗಳಲ್ಲಿ ಮಣ್ಣು ಸಾಗಾಟ ನಡೆಯುತ್ತಿರುವುದರಿಂದ ಈ ಗ್ರಾಮಗಳ ಮನೆಗಳು ಹಾಗೂ ಮನೆಯ ಸಾಮಗ್ರಿಗಳು ದೂಳಿನಿಂದ ಆವೃತ್ತವಾಗುತ್ತಿವೆ. ಜನರಿಂದ ಆಕ್ರೋಶ ವ್ಯಕ್ತವಾದಾಗ ಕೆಲವೊಮ್ಮೆ ದೂಳು ಏಳದಂತೆ ನೀರು ಸಿಂಪರಣೆ ಮಾಡಲಾಗುತ್ತದೆ.

ಅಧಿಕಾರಿಗಳ ನಿಷ್ಟ್ರಿಯತೆಯಿಂದ ನದಿ ದಡದ ಪಟ್ಟಾ ಹಾಗೂ ಸರ್ಕಾರಿ ಭೂಮಿಗಳಲ್ಲಿ ಹತ್ತಾರು ಅಡಿಗಳಷ್ಟು ಆಳದ ಕಂದಕಗಳು ಸೃಷ್ಟಿಯಾಗಿವೆ. ಗುತ್ತೂರಿನಲ್ಲಿ ಶತಮಾನಗಳ ಇತಿಹಾಸದ ಮಠ, ದೇವಸ್ಥಾನ ಹಾಗೂ ಸ್ಮಶಾನಗಳು ಅವಸಾನದ ಅಂಚಿಗೆ ಬಂದಿವೆ. ಉಳಿದ ಗ್ರಾಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 

ADVERTISEMENT

ಕೆಚ್ಚಲು ಕೊಯ್ದಂತೆ: ಇಡೀ ವರ್ಷ ನೀರಿನ ಸುಲಭ ಲಭ್ಯತೆಯಿಂದಾಗಿ ನದಿ ದಡದ ಜಮೀನುಗಳಲ್ಲಿ ವರ್ಷಕ್ಕೆ ಎರಡು ಸಮೃದ್ಧ ಬೆಳೆ ಪಡೆಯಬಹುದಾಗಿದೆ. ಆದರೆ ಹಣದ ಆಸೆಗೆ ಬಿದ್ದು ಕೆಲವು ಜಮೀನುಗಳ ಮಾಲೀಕರು ತಮ್ಮದೇ ಜಮೀನುಗಳನ್ನು ಸಾಗುವಳಿ ಮಾಡಲಾಗದಂತೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೆಚ್ಚಲು ಕೊಯ್ಯುವ ಕೃತ್ಯವಾಗಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ.

ಇಂತಹ ಕೃತ್ಯ ತಡೆಯಬೇಕಾದ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಯವರು ದೂರು ಬಂದಾಗ ಗ್ರಾಮ ಆಡಳಿತಗಾರರಿಂದ ವರದಿ ತರಿಸಿಕೊಂಡು ಜಮೀನುಗಳ ಮಾಲೀಕರಿಗೆ ದಂಡದ ನೋಟಿಸ್ ಜಾರಿ ಮಾಡಿ ಸುಮ್ಮನಾಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Highlights - ‘ನದಿ ತೀರವನ್ನು ಸಂರಕ್ಷಿಸಿ’ ತಾಲ್ಲೂಕಿನಲ್ಲಿರುವ ಸಾವಿರಾರು ಇಟ್ಟಿಗೆ ಭಟ್ಟಿಗಳಿಗೆ ಈ ಮಣ್ಣು ಆಧಾರ. ಈ ಕಾರಣಕ್ಕೆ ಅಧಿಕಾರಿಗಳು, ರಾಜಕಾರಣಿಗಳು ಮೌನ ವಹಿಸಿದ್ದಾರೆ. ಇಟ್ಟಿಗೆ ಭಟ್ಟಿಗಳಿಗೆ ಪರ್ಯಾಯವಾಗಿ ಕಚ್ಚಾವಸ್ತು ದೊರಕಿಸಿ, ತಾಲ್ಲೂಕಿನ ನದಿ ದಡವನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್ ಅಭಿಪ್ರಾಯಪಟ್ಟಿದ್ದಾರೆ.  ಪರಿಸ್ಥಿತಿ ಹೀಗೇ ಮುಂದುವರೆದರೆ ಮಳೆಗಾಲದಲ್ಲಿ ನದಿ ಪ್ರವಾಹವು ಈ ಗ್ರಾಮಗಳಿಗೆ ನುಗ್ಗಿ ಅನಾಹುತ ಉಂಟು ಮಾಡುವ ಸಾಧ್ಯತೆಯಿದೆ. ಈಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರು ಈ ಭಾಗದ ನದಿ ಅತ್ಯಂತ ಕಲುಷಿತವಾಗುತ್ತಿದೆ ಎಂದಿರುವುದು ಇಲ್ಲಿ ಉಲ್ಲೇಖನೀಯ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.