ADVERTISEMENT

ಅಧಿಕಾರಿಗಳ ಕಣ್ತಪ್ಪಿಸಿ ಬೆತ್ತಲೆ ಬೇವಿನುಡುಗೆ; ನಿಷೇಧದ ನಡುವೆಯೂ ಕೋಣ ಬಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 12:27 IST
Last Updated 4 ಮಾರ್ಚ್ 2020, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಪ್ರಾಣಿ ಬಲಿ ನಿಷೇಧವಿದ್ದರೂ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ನಗರ ದೇವತೆ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ಕೋಣ ಬಲಿ ನಡೆದಿದೆ. ಜನರು ಉಧೋ ಎಂದು ಕೂಗುತ್ತಾ ಕೋಣ ಕಡಿಯುವ ವಿಡಿಯೊ ಹರಿದಾಡುತ್ತಿದೆ.

ದೇವಸ್ಥಾನಕ್ಕೆ ಸಮೀಪ ಇರುವ ಸೀಮೆ ಎಣ್ಣೆ ಬಂಕ್‌ ಬಳಿ ಈ ಬಲಿ ನಡೆದಿದೆ ಎನ್ನಲಾಗಿದೆ. ಕೋಣ ಬಲಿ ನೀಡಿದರಷ್ಟೇ ದೇವಿ ಸಂತೃಪ್ತಗೊಳ್ಳುವಳು ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ಕೋಣ ಬಲಿ ತಪ್ಪಿಸಲೇಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ರಾತ್ರಿ ನಿದ್ದೆ ಮಾಡದೆ ಕಾದಿದ್ದರು. ದೇವಸ್ಥಾನದ ನೂರು ಮೀಟರ್‌ ವ್ಯಾಪ್ತಿಯಲ್ಲಿ ಎಲ್ಲೂ ಬಲಿ ನಡೆಯದಂತೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರೂ ಅಷ್ಟೇ ಆ ವ್ಯಾಪ್ತಿಯಲ್ಲಿ ಬಲಿ ಕೊಡದೇ ಸ್ವಲ್ಪ ದೂರದಲ್ಲಿ ಬಲಿ ನೀಡಿದ್ದಾರೆ. ಕೋಣದ ರಕ್ತಕ್ಕೆ ಚರಗ (ಬಿಳಿಜೋಳ) ಹಾಕಿದ್ದಾರೆ ಎನ್ನಲಾಗಿದೆ.

ADVERTISEMENT

ದೇವಸ್ಥಾನದ ಆವರಣದಲ್ಲಿ ಯಾವುದೇ ಬಲಿ ನಡೆದಿಲ್ಲ. ದೇವಿಗೆ ಬಿಟ್ಟ ಪಟ್ಟದ ಕೋಣ ಕೂಡ ಅಲ್ಲ. ಹೊರಗೆ ಎಲ್ಲಾದರೂ ನಡೆದಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಬೆತ್ತಲೆ ಬೇವಿನುಡುಗೆ: ಬೇವಿನುಡುಗೆ ಹರಕೆ ಹೊತ್ತವರು ಬಟ್ಟೆ ಹಾಕಿ ಅದರ ಮೇಲೆಯೇ ಬೇವಿನುಡುಗೆ ತೊಟ್ಟು ಹರಕೆ ತೀರಿಸಬಹುದು. ಯಾವುದೇ ಕಾರಣಕ್ಕೆ ಬೆತ್ತಲೆ, ಅರೆಬೆತ್ತಲೆಯಾಗಿ ಬೇವಿನುಡುಗೆ ಉಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಹರಕೆಹೊತ್ತ ಬಹುತೇಕರು ಬಟ್ಟೆಯ ಮೇಲೆಯೇ ಬೇವಿನುಡುಗೆ ತೊಟ್ಟು ಹರಕೆ ತೀರಿಸಿದ್ದಾರೆ. ಇದರ ನಡುವೆಯೇ ಬುಧವಾರ ಬೆಳಿಗ್ಗೆ ಮಹಿಳೆಯೊಬ್ಬರು ಬೆತ್ತಲೆ ದೇಹಕ್ಕೆ ಬೆವಿನುಡುಗೆ ತೊಟ್ಟು ಹರಕೆ ತೀರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.