ADVERTISEMENT

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಅರಿವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 3:56 IST
Last Updated 17 ಜುಲೈ 2021, 3:56 IST
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಕರಿಬಸವೇಶ್ವರ ಗದ್ದುಗೆ ಮೆಟ್ಟಿಲು, ಸ್ನಾನಘಟ್ಟ ಮುಳುಗಡೆಯಾಗಿದೆ. 
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಕರಿಬಸವೇಶ್ವರ ಗದ್ದುಗೆ ಮೆಟ್ಟಿಲು, ಸ್ನಾನಘಟ್ಟ ಮುಳುಗಡೆಯಾಗಿದೆ.    

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಮಳೆ ಬೀಳುತ್ತಿದ್ದು, ತುಂಗಭದ್ರಾ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಗುರುವಾರ 2.86 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟು ₹ 90 ಸಾವಿರ ನಷ್ಟವಾಗಿದೆ. ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸೇರಿ ಹಲವು ಕಡೆ ಮಳೆಯಾಗಿದ್ದು, ಒಟ್ಟು 8.3 ಮಿ.ಮೀ ಮಳೆಯಾಗಿದೆ. ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಭಾಗಗಳಲ್ಲಿ 20.4 ಮಿ.ಮೀ ಮಳೆ ಬಿದ್ದಿದೆ.

ದಾವಣಗೆರೆ ತಾಲ್ಲೂಕಿನ ಅಣಜಿ, ಆನಗೋಡು, ಕಾಡಜ್ಜಿ ಹಾಗೂ ಮಾಯಕೊಂಡಗಳಲ್ಲಿ ಒಟ್ಟು 8.2 ಮಿ.ಮೀ ಮಳೆಯಾದರೆ, ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ, ಕತ್ತಲಗೆರೆ, ತ್ಯಾವಣಗಿ, ಬಸವಾಪಟ್ಟಣ, ಜೋಳದಾಳು, ಸಂತೇಬೆನ್ನೂರು, ಉಬರಾಣಿ ಹಾಗೂ ಕೆರೆಬಿಳಚಿಗಳಲ್ಲಿ ಉತ್ತಮ ಮಳೆಯಾಗಿದ್ದು, 72.1 ಮಿ.ಮೀ ಮಳೆಯಾಗಿದೆ.

ADVERTISEMENT

ಚನ್ನಗಿರಿ ತಾಲ್ಲೂಕಿನಲ್ಲಿ ಸರಾಸರಿ 8.01 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 1.36 ಮಿ.ಮೀ, ಹರಿಹರದಲ್ಲಿ 2.07 ಮಿ.ಮೀ, ಹೊನ್ನಾಳಿ ತಾಲ್ಲೂಕಿನಲ್ಲಿ 2.90 ಮಿ.ಮೀ ಸರಾಸರಿ ಮಳೆಯಾಗಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ₹ 90 ಸಾವಿರ ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ನದಿ ಪಾತ್ರಕ್ಕೆ ತೆರಳದಿರಲು ಸೂಚನೆ

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನದಿಯ ಇಕ್ಕೆಲಗಳು ಒಂದಾದಂತೆ ಶುಕ್ರವಾರ ಕಾಣಿಸಿತು.

ನದಿ ತುಂಬಿ ಹರಿಯುತ್ತಿರುವುದರಿಂದ ನದಿಪಾತ್ರಕ್ಕೆ ಜನ–ಜಾನುವಾರು ತೆರಳದಂತೆ ಸೂಚನೆ ನೀಡಲಾಗಿದೆ. ಪಂಪ್‌ಸೆಟ್, ವಿದ್ಯುತ್ ಮಾರ್ಗ ಸ್ಪರ್ಶಿಸದಂತೆ, ಮೀನುಗಾರಿಕೆಗೆ ನದಿಯೊಳಗೆ ಇಳಿಯದಂತೆ ಗ್ರಾಮದಲ್ಲಿ ಟಾಂ ಟಾಂ ಹೊಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಸುನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಳೆಸಾಲಿನ ಗೋವಿನಹಾಳ್, ನಂದಿಗುಡಿ, ಪಾಳ್ಯ, ಉಕ್ಕಡಗಾತ್ರಿ, ಎಳೆಹೊಳೆ, ಹುಲುಗಿನಹೊಳೆ, ಮಲಳಹಳ್ಳಿ, ಇಂಗಳಗೊಂದಿ, ಧೂಳೆಹೊಳೆ, ನಂದಿಗಾವಿ, ಬಿಳಸನೂರು ಗ್ರಾಮಗಳ ನದಿ ಪಾತ್ರದ ಹತ್ತಿರ ಇರುವ ಮನೆಗಳ ಸದಸ್ಯರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

ಸುಕ್ಷೇತ್ರ ಕರಿಬಸವೇಶ್ವರ ಗದ್ದುಗೆ ಮೆಟ್ಟಿಲು, ಸ್ನಾನ ಘಟ್ಟ ಸಮೀಪ ಪ್ರವಾಹದ ನೀರು ಬಂದಿದ್ದು ಸ್ನಾನಘಟ್ಟ ಮುಳುಗಡೆಯಾಗಿದೆ. ಅಂಗಡಿಗಳನ್ನು ತೆರವು ಮಾಡಲಾಗಿದೆ ಎಂದು ದೇವಾಲಯ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಸುರೇಶ್ ತಿಳಿಸಿದರು.

ನದಿ ಪಾತ್ರದಲ್ಲಿ ರೈತರು ನದಿಗೆ ಅಳವಡಿಸಿದ್ದ ಪಂಪ್‌ಸೆಟ್, ಪ್ಯಾನಲ್ ಬೋರ್ಡ್ ಮುಳುಗಡೆಯಾಗಿವೆ. ಕೇಬಲ್ ಕೊಳವೆ ಮಾರ್ಗ ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮಸ್, ಜೆಡಿಎಸ್ ಮುಖಂಡ ಸಣ್ಣ ಸಂಜೀವರೆಡ್ಡಿ, ಪಾಟೀಲ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.