ದಾವಣಗೆರೆ: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ 653 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 200 ಅರ್ಜಿಗಳಿಗೆ ₹ 16.52 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ’ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತ ಕುಟುಂಬ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರ ಹಾಗೂ ಮಹಿಳೆಯರ ಬಲವರ್ಧನೆಗೊಳಿಸಲು 2020 ರಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ರೈತರು ಬೆಳೆಗಳ ಮೌಲ್ಯವರ್ಧನೆಯ ಮೂಲಕ ಬೆಲೆ ನಿಗದಿಪಡಿಸಿಕೊಳ್ಳಲು ಸಾಧ್ಯವಿದೆ. ಸಿರಿಧಾನ್ಯ ಬಳಸಿ ಸಣ್ಣ ಉದ್ದಿಮೆದಾರರಾಗಲು ಅವಕಾಶಗಳಿವೆ. ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಬೇಕು’ ಎಂದರು.
‘ಯೋಜನೆಯಡಿ ತಯಾರಿಸಿದ ಉತ್ಪನ್ನಕ್ಕೆ ಬ್ರ್ಯಾಂಡಿಂಗ್ ಅಗತ್ಯ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಹಾಯ ಮಾಡಲಾಗುವುದು. ಪ್ರಮುಖವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಈ ಯೋಜನೆಯ ಉದ್ದೇಶ. ಸಣ್ಣ ಉದ್ದಿಮೆದಾರರು, ರೈತರು, ಯುವಕರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ವಿನೂತನ ಶೈಲಿಯಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ವಂತ ಉದ್ಯಮಿಗಳಾಗಿ ನಾಲ್ಕಾರು ಜನಕ್ಕೆ ಕೆಲಸ ನೀಡುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದಲ್ಲಿ ಸಿರಿಧಾನ್ಯ ಬಿಸ್ಕತ್ ಘಟಕ ಯಶಸ್ವಿಯಾಗಿದೆ. ಅವರು ತಯಾರಿಸಿದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ಪ್ರತಿಯೊಬ್ಬರೂ ಸಿರಿಧಾನ್ಯ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ ಬಳಸಿ ರೊಟ್ಟಿ, ಬೆಲ್ಲ, ನಿಂಬೆ, ಬೇಕರಿ, ಮಸಾಲಾ, ತೆಂಗು ಮತ್ತು ಕುಕ್ಕುಟ ಉತ್ಪನ್ನ, ಮೆಣಸಿನ ಪುಡಿ, ಶುಂಠಿ ಸಂಸ್ಕರಣ ಘಟಕ ತಯಾರಿಸಿ ಯಶಸ್ಸು ಕಾಣಬೇಕು’ ಎಂದರು.
‘ಕೇವಲ ಗುಣಮಟ್ಟದ ಉತ್ಪನ್ನ ತಯಾರಿಸಿದರೆ ಸಾಲದು. ಬ್ರ್ಯಾಂಡ್, ಪ್ಯಾಕೇಜ್ ಮತ್ತು ಮಾರುಕಟ್ಟೆಯೂ ಮುಖ್ಯ. ಸಣ್ಣ ಉದ್ದಿಮೆದಾರರಿಗೆ, ಸ್ವ-ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಬ್ರ್ಯಾಡಿಂಗ್ ₹ 62 ಲಕ್ಷ ಹಣ ಇದೆ. ‘ಅಕ್ಕ ಕೆಫೆ’ ರೀತಿಯಲ್ಲಿ ಉತ್ತಮ ಗುಣಮಟ್ಟ ಮತ್ತು ಆಕರ್ಷಕ ಬ್ರ್ಯಾಂಡ್, ಪ್ಯಾಕಿಂಗ್ ಮಾಡಿದಲ್ಲಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೊರೆಯಲಿದೆ. ಇದರಿಂದ ಉತ್ಪಾದಕ ಹೆಚ್ಚಿನ ಲಾಭಗಳಿಸುವುದರ ಜೊತೆಗೆ ರೈತನಿಗೆ ಉಪಯುಕ್ತವಾಗಲಿದೆ’ ಎಂದರು.
ಬೆಂಗಳೂರಿನ ಕೆಫೆಕ್ ಸಂಸ್ಥೆಯ ಚಂದ್ರಶೇಖರ್, ‘ರೈತ ಬೆಳೆದ ಬೆಳೆಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಪಿಎಂಎಫ್‌ಎಂಇ ಸಹಾಯಕವಾಗಿದೆ. ಮಹಿಳೆಯರು, ಯುವಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. 18 ವರ್ಷ ಮೆಲ್ಪಟ್ಟ ಪ್ರತಿಯೊಬ್ಬರೂ ಯೋಜನೆಯ ಫಲಾನುಭವಿಯಾಗಬಹುದು. ಇದಕ್ಕೆ ಯಾವುದೇ ಶೈಕ್ಷಣಿಕ ಅರ್ಹತೆಯ ಮಾನದಂಡವಿಲ್ಲ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ನಬಾರ್ಡ್ ಮುಖ್ಯಸ್ಥೆ ರಶ್ಮಿ ರೇಖಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಹಾಜರಿದ್ದರು.
ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವಸಹಾಯ ಸಂಘಗಳಿಗೆ ದುಡಿಯುವ ಬಂಡವಾಳ ಹಾಗೂ ಸಣ್ಣ ಉಪಕರಣ ಖರೀದಿಗೆ ₹ 4 ಲಕ್ಷ ನೀಡಲು ಅವಕಾಶವಿದೆ.–ಜೀಯಾವುಲ್ಲಾ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.