ADVERTISEMENT

ಗುರು ಪರಂಪರೆ ಭಾರತೀಯತೆಯ ಹೆಮ್ಮೆ

ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:21 IST
Last Updated 11 ಜುಲೈ 2025, 4:21 IST
   

ದಾವಣಗೆರೆ: ಭಾರತೀಯ ಸಂಸ್ಕೃತಿ ವಿಶೇಷತೆಯೇ ಗುರು ಪರಂಪರೆ. ಸನಾತನ ಹೊರತುಪಡಿಸಿ ಬೇರೆ ಧರ್ಮದಲ್ಲಿ ಗುರು ಸ್ಥಾನವಿಲ್ಲ. ಈ ಮಹಾ ಸಂಸ್ಕೃತಿಯೇ ಭಾರತೀಯತೆಯ ಹೆಮ್ಮೆ ಎಂದು ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ, ಪಾರ್ವತಮ್ಮ ಸಮುದಾಯ ಭವನದಲ್ಲಿ ಸ್ವಾಮೀಜಿ ಅವರ 4ನೇ ಪೀಠಾರೋಹಣದ ಅಂಗವಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಭಕ್ತಿ ಸಿಂಚನ’ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಬುದ್ಧ ಮತ್ತು ಜೈನ ಧರ್ಮದಲ್ಲಿಯೂ ಗುರು ಪರಂಪರೆ ಇದೆ. ಈ ಎರಡು ಧರ್ಮಗಳು ಸನಾತನ ಧರ್ಮದ ಕವಲುಗಳು. ಹೀಗಾಗಿ, ಭಾರತ ಬಿಟ್ಟು ವಿಶ್ವದ ಬೇರೆಡೆ ಈ ಪರಂಪರೆ ಇಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ಗುರುಗಳಿಗೆ ಪೂಜೆ ಸಲ್ಲಿಸುವ ಪುಣ್ಯ ದಿ‌ನವೇ ಗುರು ಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮೆ ಅಂತಲೂ ಕರೆಯಲಾಗುತ್ತದೆ. ಗುರು ಪರಂಪರೆಯ ಮೂಲ ವ್ಯಾಸರು ಎಂಬುದು ಸನಾತನ ಧರ್ಮದ ನಂಬಿಕೆ. ಹಿಂದೂ ಧರ್ಮದ ನಾಲ್ಕು ವೇದಗಳನ್ನು ಸಂಯೋಜಿಸಿ ನೀಡಿದವರು ವ್ಯಾಸ ಮಹರ್ಷಿ’ ಎಂದು ಹೇಳಿದರು.

‘ಜಗತ್ತಿನಲ್ಲಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ನೀಡುವುದು ಗುರು. ಇದರಲ್ಲಿ ಸ್ತ್ರೀಯರಿಗೂ ಸಮಾನ ಸ್ಥಾನವಿದೆ. ಅಕ್ಕಮಹಾದೇವಿ, ಮೀರಾಬಾಯಿ ಅವರನ್ನು ಪುರುಷ ಗುರುವಿನಷ್ಟೇ ಸಮಾನವಾಗಿ ಕಾಣುತ್ತೇವೆ. ದೇಶದ ಎಲ್ಲೆಡೆ ಇರುವ ಮಠ, ಆಶ್ರಮಗಳು ಹಸಿದು ಬರುವವರಿಗೆ ಅನ್ನ ಮತ್ತು ಭಕ್ತಿ ನೀಡುತ್ತಿವೆ’ ಎಂದರು.

‘ಭಾರತೀಯರು ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಲಕ್ಷಾಂತರ ಸಂಖ್ಯೆಯ ವಿದೇಶಿಗರು ಭಾರತಕ್ಕೆ ಬರುವುದು ಶಿಕ್ಷಣಕ್ಕಾಗಿ ಅಲ್ಲ. ಹಿಂದೂ ಸಂಸ್ಕೃತಿ, ವೇದ, ಯೋಗ, ಧ್ಯಾನ ಕಲಿಯಲು, ಆಹಾರ, ಶಿಲ್ಪ ಕಲೆ, ನಾಟ್ಯ ಅರಿಯಲು ಭಾರತಕ್ಕೆ ಬರುತ್ತಿದ್ದಾರೆ. ಆಧ್ಯಾತ್ಮ ಅರಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪರಂಪರೆಯನ್ನು ನಾವು ಬಿಡಬಾರದು, ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

‘ಎಲ್ಲ ಸಮುದಾಯದಲ್ಲಿ ಗುರುವಿಗೆ ಸ್ಥಾನವಿದೆ. ಎಲ್ಲ ಗುರು ಸಂಪ್ರದಾಯದ ಜ್ಞಾನವನ್ನು ಪ್ರತಿಯೊಬ್ಬರು ಕಲಿಯಬೇಕು. ಶ್ರೀಕೃಷ್ಣ, ಬಸವಣ್ಣ, ಅಲ್ಲಮಪ್ರಭು, ಶಂಕರಾಚಾರ್ಯ, ಮಧ್ವಾಚಾರ್ಯರು ಸೇರಿದಂತೆ ಎಲ್ಲರ ಜ್ಞಾನವನ್ನು ಅರಿಯಲು ಪ್ರಯತ್ನಿಸಬೇಕು. ಆಗ ಅಜ್ಞಾನದ ಪೊರೆ ಕಳಚಲು ಸಾಧ್ಯ’ ಎಂದರು.

ಆರ್ಯವೈಶ್ಯ ಮಹಾಮಂಡಳಿಯ ಜಿಲ್ಲಾ ಸಮಿತಿ ಅಧ್ಯಕ್ಷ ಆರ್‌.ಜಿ.ನಾಗೇಂದ್ರ ಪ್ರಕಾಶ್‌, ಕಾರ್ಯದರ್ಶಿ ಎಂ.ನಾಗರಾಜ ಗುಪ್ತ, ಸಂಚಾಲಕ ರವಿಕುಮಾರ್‌, ಭಕ್ತಿ ಸಿಂಚನ ಸಮಿತಿಯ ಸಿ.ಆರ್‌.ವಿರೂಪಾಕ್ಷಪ್ಪ, ಎಸ್‌.ಕುಸುಮ ಶ್ರೇಷ್ಠಿ, ಬಿ.ಎಸ್‌.ನಾಗಪ್ರಕಾಶ್‌, ಕೆ.ಎಸ್‌.ರುದ್ರಶ್ರೇಷ್ಠಿ, ಆರ್‌.ಎಲ್‌.ಪ್ರಭಾಕರ್‌, ಆರ್‌.ಜಿ.ಶ್ರೀನಿವಾಸಮೂರ್ತಿ, ಬಿ.ಎಚ್‌.ಅಶೋಕ್‌, ವೈ.ಎಸ್‌.ಸುನಿಲ್‌, ಕೆ.ಎನ್‌.ಅನಂತರಾಮ ಶೆಟ್ಟಿ, ಎಚ್‌.ಟಿ.ಶ್ರೀನಿವಾಸ್‌, ಟಿ.ಎಸ್‌.ಕಿರಣ್‌ಕುಮಾರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.