ADVERTISEMENT

ಸಮವಸ್ತ್ರದ ಹಣ ಬಿಡುಗಡೆಗೆ ಒತ್ತಾಯ

ಅನುದಾನ ನೀಡದಿದ್ದರೆ ಎಸ್‌ಡಿಎಂಸಿ ಅಧ್ಯಕ್ಷರಿಂದ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:19 IST
Last Updated 8 ಡಿಸೆಂಬರ್ 2018, 12:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಆರು ತಿಂಗಳಿನಿಂದ ಬಾಕಿ ಇರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಎರಡನೇ ಹಂತದ ಸಮವಸ್ತ್ರಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌.ಡಿ.ಎಂ.ಸಿ) ಅಧ್ಯಕ್ಷರು ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕಕ್ಕರಗೊಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಕೆ. ಮಂಜಪ್ಪ, ‘ಸರ್ಕಾರವು ಮೊದಲ ಹಂತದಲ್ಲಿ ಜೂನ್‌ನಲ್ಲಿ ಒಂದು ಜೊತೆ ಸಮವಸ್ತ್ರದ ಬಟ್ಟೆಯನ್ನು ನೀಡಿತ್ತು. ಪೋಷಕರೇ ಹಣ ಕೊಟ್ಟು ಸಮವಸ್ತ್ರವನ್ನು ಹೊಲಿಸಿಕೊಂಡಿದ್ದರು. ಜುಲೈನಲ್ಲಿ ನೀಡಬೇಕಾಗಿದ್ದ ಎರಡನೇ ಹಂತದ ಸಮವಸ್ತ್ರವನ್ನು ಇನ್ನೂ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ಸಮವಸ್ತ್ರ ಪೂರೈಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್‌ ಕೊಟ್ಟರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೂ ಭಾಗ್ಯ ಕಲ್ಪಿಸಿದ್ದರು. ಆದರೆ, ಇದೀಗ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ‘ಬಟ್ಟೆ ಭಾಗ್ಯ’ವನ್ನೂ ಕಸಿದುಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಮವಸ್ತ್ರವನ್ನು ಹೊಲಿಸಿಕೊಳ್ಳಲು ದರ್ಜಿಗೆ ₹ 300 ಕೂಲಿ ನೀಡಬೇಕು. ಹಲವು ಬಡವರಿಗೆ ಇದು ದುಬಾರಿಯಾಗುತ್ತಿದೆ. ಹೀಗಾಗಿ ಸಮವಸ್ತ್ರ ಹೊಲಿಸಲು ಕೂಲಿ ಹಣವನ್ನು ಎಸ್‌.ಡಿ.ಎಂ.ಸಿ. ಖಾತೆಗೆ ಹಾಕಬೇಕು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ ಮುಗಿಯುವುದರೊಳಗೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪೋಷಕರೊಂದಿಗೆ ಚರ್ಚಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ಮಕ್ಕಳಿಗೆ ಶೂ ಕೊಡಲಾಗುತ್ತಿದೆ. ಆದರೆ, ಹಲವು ಶಾಲೆಗಳಲ್ಲಿ ಕುಳಿತುಕೊಳ್ಳಲು ಬೇಂಚ್‌ ವ್ಯವಸ್ಥೆ ಇಲ್ಲ. ಕೊಠಡಿಯೊಳಗೆ ಬರುವಾಗ ಶೂ ಬಿಚ್ಚಿಟ್ಟು ಬರಬೇಕಾಗುತ್ತಿದೆ. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಗೆ ಪೂರೈಸುವ ಅಕ್ಕಿ–ಬೇಳೆಕಾಳು ಸಹ ಕಳಪೆಯಾಗಿವೆ ಎಂದು ಅವರು ಆರೋಪಿಸಿದರು.

ಎಸ್‌.ಎಸ್‌.ಎಂ. ನಗರದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್‌ ಈಸೂರು, ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ರಿಯಾಜ್‌ ಖಾನ್‌, ಎಸ್‌.ಪಿ.ಎಸ್‌. ನಗರದ 2ನೇ ಹಂತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ್‌, ಪೋಷಕರಾದ ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.