ADVERTISEMENT

₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹೊನ್ನಾಳಿ, ಹರಿಹರ ಪೊಲೀಸರಿಂದ ಬಿಹಾರ ರಾಜ್ಯದ ಐವರು ಡಕಾಯಿತರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 9:09 IST
Last Updated 2 ಸೆಪ್ಟೆಂಬರ್ 2018, 9:09 IST
ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಹಿಳೆಯರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಬಿಹಾರದ ಐವರು ಡಕಾಯಿತರನ್ನು ಬಂಧಿಸಿದ ಹೊನ್ನಾಳಿ ಹಾಗೂ ಹರಿಹರ ವೃತ್ತದ ಪೊಲೀಸ್‌ ಸಿಬ್ಬಂದಿ ತಂಡದ ಜೊತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌, ಡಿವೈಎಸ್‌ಪಿ ಎಂ.ಕೆ. ಗಂಗಲ್‌ ಇದ್ದಾರೆ
ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಹಿಳೆಯರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಬಿಹಾರದ ಐವರು ಡಕಾಯಿತರನ್ನು ಬಂಧಿಸಿದ ಹೊನ್ನಾಳಿ ಹಾಗೂ ಹರಿಹರ ವೃತ್ತದ ಪೊಲೀಸ್‌ ಸಿಬ್ಬಂದಿ ತಂಡದ ಜೊತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌, ಡಿವೈಎಸ್‌ಪಿ ಎಂ.ಕೆ. ಗಂಗಲ್‌ ಇದ್ದಾರೆ   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಒಂಟಿ ಮಹಿಳೆಯರ ಮಾಂಗಲ್ಯಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಬಿಹಾರದ ಐವರು ದರೋಡೆಕೋರರನ್ನು ಹೊನ್ನಾಳಿ ಹಾಗೂ ಹರಿಹರ ಪೊಲೀಸರು ಬಂಧಿಸಿದ್ದಾರೆ. 24 ಪ್ರಕರಣಗಳಲ್ಲಿ ಕಳವು ಮಾಡಿದ್ದ ಒಟ್ಟು ಒಂದು ಕೆ.ಜಿ. ಆರು ಗ್ರಾಂ ತೂಕದ ₹ 30 ಲಕ್ಷ ಬೆಲೆಬಾಳುವ ಚಿನ್ನಾಭರಣ ಹಾಗೂ ಎರಡು ಬೈಕ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಬಿಹಾರ ರಾಜ್ಯದ ಗೋವಿಂದಪುರದ ಸುಮೀತ್‌ ಕುಮಾರ್‌ (24), ನಿರಂಜನ್‌ ಕುಮಾರ್‌ ಅಲಿಯಾಸ್‌ ನಿರಂಜನ್‌ ಗಪ್ತ (22), ಭಜ್ರಾಹ ಬಜಾರ್‌ ಗ್ರಾಮದ ಮುಖೇಶ್‌ ಕುಮಾರ್‌ (26), ಮದುರಾಪುರ ಗ್ರಾಮದ ರಾಕೇಶ್‌ (39) ಹಾಗೂ ಪರ್ವತಪುರ ಗ್ರಾಮದ ಸಂತೋಷ್‌ಕುಮಾರ್‌ (29) ಬಂಧಿತ ಆರೋಪಿಗಳು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಆಗಸ್ಟ್‌ 25ರಂದು ಬೆಳಗಿನ ಜಾವ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದ ಹೊರವಲಯದ ಖೇಣಿ ಮನೆಗೆ ಬಂದ ಐವರು ಡಕಾಯಿತರು, ಗಂಗಾಧರಪ್ಪ ಮೇಲೆ ಹಲ್ಲೆ ಮಾಡಿ ಚಿನ್ನದ ಸರವನ್ನು ಕಿತ್ತುಕೊಂಡರು. ಆ ವೇಳೆಗೆ ಮನೆಯಲ್ಲಿದ್ದ ಇಬ್ಬರು ಕೆಲಸಗಾರರು ತಪ್ಪಿಸಲು ಬಂದಾಗ ನಾಲ್ವರು ಡಕಾಯಿತರು ಬೈಕ್‌ನಲ್ಲಿ ಓಡಿಹೋಗಿದ್ದರು. ಸುಮೀತ್‌ ಕುಮಾರ್‌ನನ್ನು ಗಂಗಾಧರಪ್ಪನವರ ಕಡೆಯವರು ಹಿಡಿದು ಹೊನ್ನಾಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು’ ಎಂದು ತಿಳಿಸಿದರು.

ADVERTISEMENT

‘ಹೊನ್ನಾಳಿ ಸಿಪಿಐ ಲಕ್ಷ್ಮಣ ನಾಯ್ಕ, ಜೆ. ರಮೇಶ್‌, ಹೊನ್ನಾಳಿ ಪಿಎಸ್‌ಐ ಕಾಡದೇವರ, ಹರಿಹರ ಗ್ರಾಮೀಣ ಪಿಎಸ್‌ಐ ಸಿದ್ದೇಗೌಡ, ನ್ಯಾಮತಿ ಪಿಎಸ್‌ಐ ಹನುಂತಪ್ಪ ಶಿರೇಹಳ್ಳಿ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಸುಮೀತ್‌ ಕುಮಾರ್‌ನಿಂದ ಮಾಹಿತಿ ಕಲೆ ಹಾಕಿ, ಅದೇ ದಿನ ಉಳಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು’ ಎಂದು ತಿಳಿಸಿದರು.

‘ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದಾಗ ಜಿಲ್ಲೆಯ ಹಲವು ಸರಗಳ್ಳತನ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂತು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ಮಾರ್ಗದರ್ಶನದಲ್ಲಿ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ಎಂ.ಕೆ. ಗಂಗಲ್‌ ನೇತೃತ್ವದಲ್ಲಿ ಹರಿಹರ ಹಾಗೂ ಹೊನ್ನಾಳಿ ವೃತ್ತದ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚೆನ್ನೈ ಹಾಗೂ ತುಮಕೂರಿನಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು. ತಂಡವು ಅಲ್ಲಿಗೆ ತೆರಳಿ ಅವುಗಳನ್ನು ಜಪ್ತಿ ಮಾಡಿದೆ’ ಎಂದು ವಿವರಿಸಿದರು.

‘2016ರಲ್ಲೂ ಇವರು ಜಿಲ್ಲೆಯಲ್ಲಿ ಸರ ಕಿತ್ತುಕೊಂಡು ಹೋಗಿದ್ದರು. ಸುಮೀತ್‌ ಕುಮಾರ್‌ಗೆ ಕನ್ನಡ ಭಾಷೆ ಸ್ವಲ್ಪ ಬರುತ್ತಿತ್ತು. ಆತನ ಮಾರ್ಗದರ್ಶನದಲ್ಲಿ ವಿಶೇಷವಾಗಿ ಬೆಳ್ಳಿ– ಬಂಗಾರದ ಒಡವೆಗಳನ್ನು ಪಾಲಿಶ್‌ ಮಾಡಿಕೊಡುವ ನೆಪದಲ್ಲಿ ಇವರು ಒಂಟಿ ಮನೆಗೆ ಬರುತ್ತಿದ್ದರು. ಪಾಲಿಶ್‌ ಮಾಡುತ್ತಿದ್ದ ವೇಳೆ ನೀರು ತರುವಂತೆ ಮಹಿಳೆಯನ್ನು ಮನೆಯೊಳಗೆ ಕಳುಹಿಸಿ, ಒಡವೆಯೊಂದಿಗೆ ಪರಾರಿಯಾಗುತ್ತಿದ್ದರು. ಪಾಲಿಶ್‌ ಮಾಡುವಾಗ ಬಲವಂತವಾಗಿಯೂ ಕಿತ್ತುಕೊಂಡು ಹೋಗಿದ್ದಿದೆ. ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಮಾಂಗಲ್ಯಸರವನ್ನು ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಹೋಗುತ್ತಿದ್ದರು. ಒಂದು ಬಾರಿ ಕಳವು ಮಾಡಿದ ಬಳಿಕ ಎರಡು– ಮೂರು ತಿಂಗಳು ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದರು’ ಎಂದರು.

ಪೊಲೀಸ್‌ ಅಧಿಕಾರಿಗಳ ಜೊತೆಗೆ ಸಿಬ್ಬಂದಿಯಾದ ರಾಘವೇಂದ್ರ, ಜೀದ್‌, ರಮೇಶ್‌ ನಾಯ್ಕ, ಶಾಚಿತರಾಜ್‌, ಮಹಮದ್‌ ಇಲಿಯಾಸ್‌, ರಾಮಚಂದ್ರ ಜಾಧವ್‌, ಫೈರೋಜ್‌ ಖಾನ್‌, ವೆಂಕಟರಮಣ, ಸೈಯದ್‌ ಗಫಾರ್‌, ಗಿರೀಶ್‌ನಾಯ್ಕ, ಕೃಷ್ಣ, ವೆಂಕಟೇಶ್‌ ದೇವರಾಜ, ಮಂಜು, ನಾಗನಗೌಡ, ಚಾಲಕ ಮಹೇಶ್‌ ಕುಮಾರ್‌ ಅವರೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಹುಮಾನ ಘೋಷಣೆ

ಆರೋಪಿಗಳು ಕಿತ್ತುಕೊಂಡು ಹೋಗಿದ್ದ ಒಟ್ಟು ಒಂದು ಕೆ.ಜಿ. ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸ್‌ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ₹ 10,000 ಬಹುಮಾನವನ್ನು ಘೋಷಿಸಿದರು.

ತಂಡಕ್ಕೆ ಇನ್ನೂ ಹೆಚ್ಚಿನ ಮೊತ್ತದ ಬಹುಮಾನವನ್ನು ಇಲಾಖೆಯಿಂದ ನೀಡುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು ಎಂದು ಅವರು ತಿಳಿಸಿದರು.

ಎಲ್ಲೆಲ್ಲಿ ಪ್ರಕರಣ ನಡೆದಿತ್ತು?

ಹೊನ್ನಾಳಿ ಠಾಣೆಯಲ್ಲಿ 5, ಹರಿಹರ ನಗರ ಠಾಣೆಯಲ್ಲಿ 3, ಹರಿಹರ ಗ್ರಾಮಾಂತರ ಠಾಣೆ ಹಾಗೂ ಹರಪನಹಳ್ಳಿ ಠಾಣೆಯಲ್ಲಿ ತಲಾ 2, ನ್ಯಾಮತಿ, ಮಲೇಬೆನ್ನೂರು, ಅರಸಿಕೆರೆ, ಜಗಳೂರು, ಬಿಳಿಚೋಡು, ದಾವಣಗೆರೆ ಗ್ರಾಮಾಂತರ, ಆಜಾದ್‌ನಗರ, ಚನ್ನಗಿರಿ, ಸಂತೇಬೆನ್ನೂರು; ಚಿತ್ರದುರ್ಗದ ಬಡಾವಣೆ ಠಾಣೆ, ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ, ಚೇಳೂರು ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿ ಒಟ್ಟು 24 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.