ADVERTISEMENT

ಒಳಮೀಸಲು ಗೊಂದಲ, ಮುಖಂಡರಿಗೆ ತರಾಟೆ: ಸಭೆಯಿಂದ ಹೊರನಡೆದ ರುದ್ರಪ್ಪ ಲಮಾಣಿ

ಸ್ಪಷ್ಟನೆ ಬಯಸಿದ ಬಂಜಾರ ಸಮುದಾಯದ ಮುಖಂಡರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 0:18 IST
Last Updated 16 ಸೆಪ್ಟೆಂಬರ್ 2025, 0:18 IST
ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ್ತು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಜಯದೇವ ನಾಯ್ಕ ಸಭೆಯಿಂದ ಹೊರನಡೆದ ಸಂದರ್ಭ 
ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ್ತು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಜಯದೇವ ನಾಯ್ಕ ಸಭೆಯಿಂದ ಹೊರನಡೆದ ಸಂದರ್ಭ    

ನ್ಯಾಮತಿ (ದಾವಣಗೆರೆ): ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಭಾನುವಾರ ಏರ್ಪಡಿಸಿದ್ದ ಸರ್ವಸದಸ್ಯರ ವಾರ್ಷಿಕ ಸಭೆ, ಒಳ ಮೀಸಲಾತಿ ಕುರಿತ ವಾಗ್ವಾದದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿತು.

ವಿಧಾನಸಭೆ ಉಪಸಭಾಧ್ಯಕ್ಷರೂ ಆಗಿರುವ ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಸಭೆ ಏರ್ಪಾಡಾಗಿತ್ತು.

ಸಮುದಾಯದ ಮುಖಂಡರು ಸಭೆ ಆರಂಭದಲ್ಲೇ, ‘ಒಳಮೀಸಲಾತಿ ಜಾರಿಯಿಂದ ನಮಗೆ ಅನ್ಯಾಯವಾಗಿದೆ. ಆದರೂ ನೀವು ಸಮುದಾಯದವರ ಒಪ್ಪಿಗೆ ಪಡೆಯದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ ಸನ್ಮಾನಿಸಿದ್ದು ಏಕೆ?’ ಎಂದು ಪ್ರಶ್ನಿಸಿದರು.

ADVERTISEMENT

‘‌ಒಳ ಮೀಸಲಾತಿ ಜಾರಿಯಿಂದ ಬಂಜಾರ ಸಮುದಾಯದವರಿಗೆ ಅನ್ಯಾಯವಾಗಿದೆ ಎಂದು ಸಮಾಜದ ಪ್ರತಿನಿಧಿಗಳಾಗಿ ಸರ್ಕಾರದ ಮಟ್ಟದಲ್ಲಿ ಏಕೆ ಧ್ವನಿ ಎತ್ತಲಿಲ್ಲ ಎಂದು ಸ್ಪಷ್ಟನೆ ನೀಡಿ’ ಎಂದು ರುದ್ರಪ್ಪ ಲಮಾಣಿ ಮತ್ತು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಜಯದೇವ ನಾಯ್ಕ ಅವರನ್ನು ಮುಖಂಡರು ಪ್ರಶ್ನಿಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಲೂ ಆರಂಭಿಸಿದರು. ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವವರು ವೇದಿಕೆಯಿಂದ ಇಳಿದು ಬನ್ನಿ ಎಂದು ಪ್ರಮುಖರು ಕರೆದಾಗ ರುದ್ರಪ್ಪ ಲಮಾಣಿ, ಜಯದೇವ ನಾಯ್ಕ, ಹೀರಾನಾಯ್ಕ, ಬೋಜ್ಯನಾಯ್ಕ ಹೊರತುಪಡಿಸಿ ಉಳಿದವರು ಕೆಳಗೆ ಬಂದರು. ಆಗ ಸ್ಥಳದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತಲ್ಲದೆ, ಮುಖಂಡರ ನಡುವೆ ವಾಗ್ವಾದ ನಡೆಯಿತು.

ರುದ್ರಪ್ಪ ಲಮಾಣಿ ಮತ್ತು ಜಯದೇವ ನಾಯ್ಕ ಅವರು ಮೌನ ವಹಿಸಿ, ಪೊಲೀಸರು ಮತ್ತು ಸಮುದಾಯದ ಕೆಲವರ ಭದ್ರತೆಯಲ್ಲಿ ಸಭೆಯಿಂದ ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.