ಸತೀಶ ಜಾರಕಿಹೊಳಿ
ಹರಿಹರ (ದಾವಣಗೆರೆ): ‘ಒಳಮೀಸಲಾತಿ ವಿಚಾರ ಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಏನೂ ಮಾಡಲಾಗದು. ಅಲ್ಲಿಯವರೆಗೆ ಕಾಯುವುದರಲ್ಲೂ ಅರ್ಥವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಇಲ್ಲಿ ಅಭಿಪ್ರಾಯಪಟ್ಟರು.
‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ನಂತರವೇ 56,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವಿದೆ. ಆದ್ದರಿಂದ ಹಳೆ ಮೀಸಲಾತಿಯನ್ನೇ ಮುಂದುವರಿಸಲು ನಿರ್ಧರಿಸಿದ್ದೇವೆ’ ಅವರು ಹೇಳಿದರು.
ಇಲ್ಲಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಸೋಮವಾರ ಭೇಟಿ ನೀಡಿ ಪ್ರಸನ್ನಾನಂದ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರತಿ ವರ್ಷ 5,000ದಿಂದ 10,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಸದ್ಯಕ್ಕೆ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ಪಂಗಡಕ್ಕೆ ಶೇ 3ರ ಮೀಸಲಾತಿಯನ್ನೇ ಮುಂದುವರಿಸುತ್ತೇವೆ’ ಎಂದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕೇಂದ್ರ ಸರ್ಕಾರವು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಿದರೆ ಎಲ್ಲಾ ಗೊಂದಲಗಳೂ ಬಗೆಹರಿಯುತ್ತವೆ’ ಎಂದರು.
‘ಅಧಿಕಾರ ಹಂಚಿಕೆ ವಿಚಾರವಾಗಿ ಸೃಷ್ಟಿಯಾಗಿರುವ ಗೊಂದಲಗಳು ಬಗೆಹರಿಯಬೇಕೆಂಬುದು ಎಲ್ಲರ ಆಗ್ರಹ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಈ ಕುರಿತು ಸಭೆ ನಡೆಸಲಿದ್ದಾರೆ’ ಎಂದು ತಿಳಿಸಿದರು.
‘ಅಧಿಕಾರ ಹಂಚಿಕೆ ಗೊಂದಲ ಬಗೆಹರಿಯಬೇಕು. ಇಲ್ಲವಾದರೆ ಕಾರ್ಯಕರ್ತರು, ಶಾಸಕರು, ಅಧಿಕಾರಿಗಳಲ್ಲೂ ಗೊಂದಲ ಉಂಟಾಗಲಿದೆ. ಹೈಕಮಾಂಡ್ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.