ದಾವಣಗೆರೆ: ಯೋಗ ಭೂಷಣ, ಯೋಗಸಿರಿ, ಯೋಗಾಚಾರ್ಯ, ರಾಜ್ಯೋತ್ಸವ, ರಾಜಕುಮಾರ್ ಯೋಗ ಟ್ರೋಫಿ, ಮೈಸೂರು ದಸರಾ ಅತ್ಯುತ್ತಮ ರೆಫರಿ, ಪುದುಚೇರಿ ಮುಖ್ಯಮಂತ್ರಿ ಪದಕ, ಅಂತರರಾಷ್ಟ್ರೀಯ ಯೋಗ ಸಾಧಕ....
ಹೀಗೆ ಸಾಲು ಸಾಲು ಗೌರವ, ಪುರಸ್ಕಾರಗಳಿಗೆ ಪಾತ್ರರಾಗಿರುವವರು ದಾವಣಗೆರೆಯ ಯೋಗ ಗುರು ತೀರ್ಥರಾಜ್ ಹೋಲೂರ್.
ಇವರು ಮೂಲತಃ ದಾವಣಗೆರೆ ತಾಲ್ಲೂಕಿನ ಕೋಲ್ಕುಂಟೆಯವರು. ಜನಿಸಿದ್ದು, ಬೆಳೆದಿದ್ದೆಲ್ಲಾ ದಾವಣಗೆರೆ ನಗರದಲ್ಲಿ. ತಂದೆ ದಿ.ಚಂದ್ರಶೇಖರ್, ತಾಯಿ ಸುವರ್ಣಮ್ಮ. ಬಾಪೂಜಿ ಸ್ಕೂಲ್‌ನಲ್ಲಿ ಪ್ರಾಥಮಿಕ, ಮೋತಿ ವೀರಪ್ಪ ಶಾಲೆಯಲ್ಲಿ ಪ್ರೌಢ ಹಾಗೂ ‘ಮಾಸಬ’ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿರುವ ತೀರ್ಥರಾಜ್, ವಿದ್ಯಾರ್ಥಿ ದೆಸೆಯಲ್ಲೇ ಯೋಗದೆಡೆ ಆಕರ್ಷಿತರಾದವರು.
ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಯಿಂದ ಪ್ರೇರಣೆ ಪಡೆದು ಯೋಗದಲ್ಲಿ ಉನ್ನತ ಸಾಧನೆ ಮಾಡುವ ಕನಸು ಕಂಡ ಇವರು, ಸ್ವಾಮೀಜಿಯ ಪರಮ ಶಿಷ್ಯ ವಿಠ್ಠಲ್ ದಾಸ್ ಕೆ.ಶೆಣೈ ಹಾಗೂ ಅವರ ಶಿಷ್ಯ ನಾಗಶೈನಾ ಅವರಿಂದ ಯೋಗ ಕೌಶಲಗಳನ್ನು ಕರಗತ ಮಾಡಿಕೊಂಡವರು. ಯೋಗದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸುವ ಸಲುವಾಗಿ ಮಲ್ಲಾಡಿಹಳ್ಳಿಯಲ್ಲಿ ಯೋಗ ಡಿಪ್ಲೊಮಾವನ್ನೂ ಪೂರೈಸಿದ್ದಾರೆ.
20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಈ ಸುದೀರ್ಘ ಅವಧಿಯಲ್ಲಿ ಜಿಲ್ಲೆಯಲ್ಲಿ 1000ಕ್ಕೂ ಅಧಿಕ ಯೋಗ ಶಿಬಿರಗಳನ್ನು ಉಚಿತವಾಗಿ ನಡೆಸಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ 20,000ಕ್ಕೂ ಹೆಚ್ಚು ಜನರಲ್ಲಿ ಆರೋಗ್ಯದ ಅರಿವು ಮೂಡಿಸಿದ ಹಿರಿಮೆ ಇವರದ್ದು.
2018ರಲ್ಲಿ ತಮಿಳುನಾಡಿನ ಮಹಾಬಲಿಪುರಂನ ಕಡಲ ಕಿನಾರೆಯಲ್ಲಿ, ಸುಡುವ ಮರಳಿನಲ್ಲಿ 32 ನಿಮಿಷ ಸೇತುಬಂಧಾಸನ (ಅಂಗಾತ ಮಲಗಿ ದೇಹವನ್ನು ಸೇತುವೆ ಆಕಾರದಲ್ಲಿ ಬಾಗಿಸುವುದು/ಬ್ರಿಡ್ಜ್ ಪೋಸ್) ಮಾಡುವ ಮೂಲಕ ಗಿನ್ನೀಸ್ ದಾಖಲೆ ಬರೆದಿದ್ದಾರೆ. 2019ರಲ್ಲಿ ನಡೆದಿದ್ದ ಸಾಮೂಹಿಕ ವೀರಭದ್ರಾಸನ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಯೋಗ ಶಿಕ್ಷಕ, ಯೋಗಪಟು ಹಾಗೂ ಯೋಗ ತೀರ್ಪುಗಾರರಾಗಿಯೂ ಇವರು ಹೆಜ್ಜೆಗುರುತು ಮೂಡಿಸಿದ್ದಾರೆ.
ಪರಮಾನಂದ ಯೋಗ ಕೇಂದ್ರ, ಮಾತೃಛಾಯಾ ಯೋಗ ಕೇಂದ್ರ, ಸದಾನಂದ ಯೋಗ ಕೇಂದ್ರ, ಎಸ್.ಎಸ್.ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಾಗಿ, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರಿಗೆ ಯೋಗ ಕೌಶಲ ಕಲಿಸುವ ಕಾಯಕದಲ್ಲಿ ತೊಡಗಿದ್ದಾರೆ. ವಿನೋಬನಗರ ಹಾಗೂ ಎಸ್.ಎಂ.ಕೃಷ್ಣ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಿರ್ಮಿತ ಕೇಂದ್ರದಲ್ಲಿ ಇರುವವರಿಗೂ ಉಚಿತವಾಗಿ ಯೋಗ ತರಬೇತಿ ನೀಡುವ ಮೂಲಕ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.
ಇವರ ಗರಡಿಯಲ್ಲಿ ಪಳಗುತ್ತಿರುವ ಯೋಗಪಟುಗಳು ಖೇಲೋ ಇಂಡಿಯಾ ಕ್ರೀಡಾಕೂಟ ಸೇರಿದಂತೆ ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಶ್ರೀಲಂಕಾದಲ್ಲಿ ನಡೆದಿದ್ದ ಯೋಗ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಹಾಗೂ ಪ್ರಶಸ್ತಿಯ ಸಾಧನೆ ಮಾಡಿದ್ದಾರೆ.
ಪುದುಚೇರಿಯಲ್ಲಿ ಪ್ರತಿವರ್ಷ ನಡೆಯುವ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಚೆನ್ನೈನ ಟಿಸಿಎಸ್ ಕಂಪನಿಯಲ್ಲಿ ನಡೆದಿದ್ದ ಯೋಗ ಸ್ಪರ್ಧೆಯಲ್ಲಿ ಮುಖ್ಯ ತೀರ್ಪುಗಾರರಾಗಿ ಕೆಲಸ ಮಾಡಿದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮತ್ತು ದಾವಣಗೆರೆ ಜಿಲ್ಲಾ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಭಾರತದ ಕಲೆ ಮತ್ತು ಯೋಗ ಸಂಸ್ಕೃತಿಯನ್ನು ಪಸರಿಸಬೇಕು. ಇದು ನನ್ನ ಬದುಕಿನ ಗುರಿ.– ತೀರ್ಥರಾಜ್ ಹೋಲೂರ್, ಯೋಗ ಗುರು
ಯೋಗ ಕುಟುಂಬ; ಸಾಮಾಜಿಕ ಕಾರ್ಯ ತೀರ್ಥರಾಜ್ ಅವರದ್ದು ಯೋಗ ಕುಟುಂಬ. ಪತ್ನಿ ಸುಮಾ ತೀರ್ಥರಾಜ್ ಅಂತರರಾಷ್ಟ್ರೀಯ ಯೋಗ ತರಬೇತುದಾರರಾಗಿದ್ದಾರೆ. ಮಗಳು ಐಶ್ವರ್ಯ ಎಚ್.ಟಿ ‘ಆರ್ಟಿಸ್ಟಿಕ್ ಯೋಗ ಪ್ಲೇಯರ್’.
ಮಗ ಅಕ್ಷತ್ ಎಚ್.ಟಿ. ದ್ವಿತೀಯ ಪಿಯು ಓದುತ್ತಿದ್ದಾರೆ. 2023ರಲ್ಲಿ ಅಷ್ಟಾಂಗ ವಿನ್ಯಾಸ ಅಂತರರಾಷ್ಟ್ರೀಯ ಯೋಗ ಅಕಾಡೆಮಿ ಆರಂಭಿಸಿರುವ ತೀರ್ಥರಾಜ್ ಇದರ ಅಧ್ಯಕ್ಷರೂ ಆಗಿದ್ದಾರೆ. ಈ ಅಕಾಡೆಮಿಯಿಂದ ಬಂದ ಹಣವನ್ನು ಅವರು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ದಾವಣಗೆರೆ ಹೊರವಲಯದ ತುರ್ಚಘಟ್ಟದಲ್ಲಿ ಯೋಗ ಮತ್ತು ಧ್ಯಾನ ಮಂದಿರ ಸ್ಥಾಪಿಸಲೂ ಸಿದ್ಧತೆ ನಡೆಸಿದ್ದಾರೆ.
ಪ್ರಮುಖ ಸಾಧನೆ
*2025ರಲ್ಲಿ ವಿಯೆಟ್ನಾಂನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಯೋಗ ರತ್ನ ಗೌರವ.
*2025ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಯೋಗ ಪ್ರಚಾರಕ ಪುರಸ್ಕಾರ.
*2023ರಲ್ಲಿ ವಿಯೆಟ್ನಾಂನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ‘ಯೋಗ ಅಚೀವರ್’ ಗೌರವ.
*2022ರಲ್ಲಿ ಸಂಡೂರು ರಾಜ ಕುಟುಂಬದಿಂದ ಗೌರವ ಪುರಸ್ಕಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.