ADVERTISEMENT

ತುಡಿತಕ್ಕೆ ಧ್ವನಿಯಾಗುವ ‘ಇಂತಿನಮಸ್ಕಾರ’ ಕೃತಿ

ಕೃತಿ ಬಿಡುಗಡೆ ಮಾಡಿದ ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 3:54 IST
Last Updated 23 ನವೆಂಬರ್ 2020, 3:54 IST
ದಾವಣಗೆರೆಯ ರೋಟರಿ ಭವನದಲ್ಲಿ ಭಾನುವಾರ ‘ಇಂತಿ ನಮಸ್ಕಾರಗಳು’ ಪುಸ್ತಕವನ್ನು ಸಾಹಿತಿ ಲೋಕೇಶ್‌ ಅಗಸನಕಟ್ಟೆ ಮತ್ತು ಅತಿಥಿಗಳು ಬಿಡುಗಡೆಗೊಳಿಸಿದರು
ದಾವಣಗೆರೆಯ ರೋಟರಿ ಭವನದಲ್ಲಿ ಭಾನುವಾರ ‘ಇಂತಿ ನಮಸ್ಕಾರಗಳು’ ಪುಸ್ತಕವನ್ನು ಸಾಹಿತಿ ಲೋಕೇಶ್‌ ಅಗಸನಕಟ್ಟೆ ಮತ್ತು ಅತಿಥಿಗಳು ಬಿಡುಗಡೆಗೊಳಿಸಿದರು   

ದಾವಣಗೆರೆ: ಪ್ರತಿ ವ್ಯಕ್ತಿಯ ತುಡಿತಕ್ಕೆ ಧ್ವನಿಯಾಗುವುದೇ ‘ಇಂತಿ ನಮಸ್ಕಾರಗಳು’ ಕೃತಿಯ ಹೆಚ್ಚುಗಾರಿಕೆ ಎಂದು ವಿಮರ್ಶಕ, ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.

ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್‌ ಅವರ ಇಂತಿ ನಮಸ್ಕಾರಗಳು ಕೃತಿಯನ್ನು ರೋಟರಿ ಬಾಲಭವನದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಒಡಲಾಳದ ಸಂಕಟಗಳಿಗೆ, ಬದುಕಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ. ಉತ್ತರ ಕಂಡುಕೊಳ್ಳಲು ಮಾಡುವ ಹುಡುಕಾಟ ಈ ಕವಿತೆಗಳಲ್ಲಿ ಇದೆ. ಪ್ರೀತಿ ದೊಡ್ಡದೋ, ಬದುಕು ದೊಡ್ಡದೋ ಅಥವಾ ಬದುಕನ್ನು ಪ್ರೀತಿಸುವುದು ದೊಡ್ಡದೋ ಎಂಬ ಪ್ರಶ್ನೆಗಳು ಇಲ್ಲಿ ಮೂಡುತ್ತವೆ ಎಂದು ವಿವರಿಸಿದರು.

ADVERTISEMENT

ಸಂಸ್ಕೃತಿ ಚಿಂತಕ ಡಾ. ಸಿರಾಜ್ ಅಹಮದ್ ಮಾತನಾಡಿ, ‘ಕವಿತೆಗಳಿಗೆ, ಪ್ರೀತಿಗೆ ಕೊನೆಯಿಲ್ಲ. ‘ಇಂತಿ ನಮಸ್ಕಾರಗಳು’ ಎಂದು ಬರವಣಿಗೆ ಇಲ್ಲಿಗೇ ನಿಲ್ಲಬಾರದು’ ಎಂದರು.

‘ಸಾಮಾಜಿಕ ಮೌಲ್ಯಗಳು, ಕಟ್ಟುಪಾಡುಗಳ ಬಗೆಗೆ ಗಂಭೀರ ಪ್ರಶ್ನೆಗಳನ್ನು ಲೇಖಕರು ಎತ್ತುತ್ತಾರೆ. ದೇಹದ ವಾಂಛೆಗಳನ್ನು ಮೀರಿ ಪ್ರೇಮದ ಬಗ್ಗೆ, ಮೋಹದ ಬಗ್ಗೆ ಚಿಂತಿಸುವ ಪ್ರಕಾಶ್‌ ಅವರ ಆರಾಧ್ಯ ದೈವವಾಗಿರುವ ಯೇಟ್ಸ್‌ನಂತೆ ಪ್ರಕಾಶ್ ಕೊಡಗನೂರ್ ಕೂಡ ರೂಪಕಗಳನ್ನು ಸೃಷ್ಟಿ ಮಾಡುವುದರ ಕಡೆಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಎಂ.ಆರ್. ಯೋಗೇಶ್ವರಯ್ಯ, ಕೃತಿಕಾರ ಪ್ರಕಾಶ್‌ ಕೊಡಗನೂರ್‌, ಲೋಕಣ್ಣ, ಚನ್ನೇಶ್ ಹೊನ್ನಾಳಿ, ಶರಣಪ್ಪ ಎಂ.ಟಿ., ನಾಗರಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.