ADVERTISEMENT

ಜಗಳೂರು: ಪಂಚಾಯಿತಿಗಳಲ್ಲಿ ಅನುದಾನ ದುರ್ಬಳಕೆ ಆರೋಪ, ತನಿಖೆ ಶುರು

ಡಿ.ಶ್ರೀನಿವಾಸ
Published 3 ಜೂನ್ 2022, 4:12 IST
Last Updated 3 ಜೂನ್ 2022, 4:12 IST
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ 15ನೇ ಹಣಕಾಸುವ ಅವ್ಯವಹಾರದ ಬಗ್ಗೆ ಪಿಡಿಒ ವಿಜಯಲಕ್ಷ್ಮೀ ಅವರಿಂದ ಮಾಹಿತಿ ಪಡೆಯುತ್ತಿರುವ ತನಿಖಾ ತಂಡದ ಅಧಿಕಾರಿಗಳು
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ 15ನೇ ಹಣಕಾಸುವ ಅವ್ಯವಹಾರದ ಬಗ್ಗೆ ಪಿಡಿಒ ವಿಜಯಲಕ್ಷ್ಮೀ ಅವರಿಂದ ಮಾಹಿತಿ ಪಡೆಯುತ್ತಿರುವ ತನಿಖಾ ತಂಡದ ಅಧಿಕಾರಿಗಳು   

ಜಗಳೂರು:ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಎರಡು ವರ್ಷಗಳ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಕಾರಣ ಜಿಲ್ಲಾ ಪಂಚಾಯಿತಿಯಿಂದ ತನಿಖೆಗಾಗಿ ತಂಡ ನೇಮಿಸಿದ್ದು, ತನಿಖೆ ಚುರುಕುಗೊಂಡಿದೆ.

ಜಿಲ್ಲಾ ಪಂಚಾಯಿತಿಯಿಂದ 6 ತನಿಖಾ ತಂಡಗಳನ್ನು ನೇಮಕ ಮಾಡಿದ್ದು, ಜೂನ್ 1ರಿಂದ ಜೂನ್ 9ರವರೆಗೆ ತಾಲ್ಲೂಕಿನ 22 ಪಂಚಾಯಿತಿಗಳಲ್ಲಿ 2020-21ನೇ ಹಾಗೂ 2021-22ನೇ ಸಾಲಿನಲ್ಲಿ ಬಿಡುಗಡೆಯಾದ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನ ಮತ್ತು ಮಾಡಿರುವ ವೆಚ್ಚದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.

ತನಿಖಾ ತಂಡಗಳು ಬಂದು ವಿಚಾರಣೆ ಕೈಗೊಂಡಿವೆ. 15ನೇ ಹಣಕಾಸು ಅನುದಾನವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ, ನಕಲಿ ಬಿಲ್ ಸೃಷ್ಟಿಸಿ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬೇಕಾಬಿಟ್ಟಿ ಹಣ ಬಿಡುಗಡೆ ಮಾಡಿಕೊಂಡಿರುವ ಬಗ್ಗೆ ಬಸವನಕೋಟೆ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಸೇರಿ ಹಲವು ಪಂಚಾಯಿತಿಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಉಳಿದ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಪಿಡಿಒಗಳ ಮೇಲೆ 15ನೇ ಹಣಕಾಸು ಅನುದಾನ ದುರ್ಬಳಕೆ ಬಗ್ಗೆ ಗಂಭೀರವಾದ ಆರೋಪಗಳಿದ್ದು, ಸಾರ್ವಜನಿಕರಿಂದ ಸಾಕಷ್ಟು ಲಿಖಿತ ದೂರುಗಳ ಸಲ್ಲಿಕೆಯಾದ ಪರಿಣಾಮ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

ADVERTISEMENT

15 ನೇ ಹಣಕಾಸು ಅನುದಾನ ಬಳಕೆ ಮಾಡಿರುವ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಯಾವುದೇ ಪಂಚಾಯಿತಿಗಳು ಇದುವರೆಗೆ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎನ್ನಲಾಗಿದೆ.

ಪಂಚಾಯಿತಿ ವಾರು ತನಿಖೆ: ಲೆಕ್ಕಾಧಿಕಾರಿ ಎಂ.ಎ. ವೆಂಕಟೇಶ್ ಹಾಗೂ ಎನ್. ನವ್ಯಶ್ರೀ ನೇತೃತ್ವದ ತನಿಖಾ ತಂಡ ಜೂನ್ 7ರವರೆಗೆ ಕ್ಯಾಸೇನಹಳ್ಳಿ ಪಂಚಾಯಿತಿ, ಹೊಸಕೆರೆ ಹಾಗೂ ಕೆಚ್ಚೇನಹಳ್ಳಿ ಪಂಚಾಯಿತಿಗಳಲ್ಲಿ ತನಿಖೆ ನಡೆಸಲಿದೆ.

ಲೆಕ್ಕಾಧಿಕಾರಿ ಆರ್.ಆರ್. ವಂದನಾ ಹಾಗೂ ತಿಪ್ಪೇಸ್ವಾಮಿ ತಂಡ ಜೂನ್ 7ರವರೆಗೆ ಬಿಳಿಚೋಡು, ದೇವಿಕೆರೆ ಹಾಗೂ ಹಾಲೇಕಲ್ಲು ಪಂಚಾಯಿತಿಯಲ್ಲಿ ಹಾಗೂ ‌ಲೆಕ್ಕ ಅಧೀಕ್ಷಕ ಸಿ. ನಾಗರಾಜ್, ರಹೀಂಖಾನ್ ನೇತೃತ್ವದ ತಂಡ ಬಿದರಕೆರೆ, ತೋರಣಗಟ್ಟೆ, ಬಿಸ್ತುವಳ್ಳಿ, ಗುತ್ತಿದುರ್ಗ ಪಂಚಾಯಿತಿಗಳಲ್ಲಿ ತನಿಖೆ ನಡೆಸಲಿದೆ. ಲೆಕ್ಕ ಅಧೀಕ್ಷಕ ಬಿ.ಎ. ಮನೋಹರ್ ಹಾಗೂ ಷಂಶುನ್ನೀಸಾ ತಂಡ ಜೂನ್ 9ವೆರೆಗೆ ಅಸಗೋಡು, ಪಲ್ಲಾಗಟ್ಟೆ, ಸೊಕ್ಕೆ, ಗುರುಸಿದ್ದಾಪುರ,ಲೆಕ್ಕ ಅಧೀಕ್ಷಕ ಎಚ್. ರಮೇಶ್ ಕುಮಾರ್, ಅಪರ್ಣ, ಸುರೇಶ್ ಅಕ್ಕಿ ನೇತೃತ್ವದ ತಂಡ ಬಸವನಕೋಟೆ, ದಿದ್ದಿಗೆ, ದೊಣೆಹಳ್ಳಿ ಹಾಗೂ ಹಿರೇಮಲ್ಲನಹೊಳೆಗಳಲ್ಲಿ ತನಿಖೆ ನಡೆಸಲಿದೆ. ಲೆಕ್ಕ ಅಧೀಕ್ಷಕಿ ಸುಮಿತ್ರಾ, ಕೆ.ಎಂ. ವನಿತಾ ತಂಡ ಅಣಬೂರು, ಹನುಮಂತಾಪುರ, ಮುಸ್ಟೂರು ಹಾಗೂ ಕಲ್ಲೇದೇವಪುರಗಳಲ್ಲಿ ತನಿಖೆ ಕೈಗೊಳ್ಳಲಿದೆ.

ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ನೀಡಬೇಕು. ಇಲ್ಲವಾದಲ್ಲಿ ಪಿಡಿಒಗಳನ್ನು ಹೊಣ ಮಾಡಲಾಗುವುದು ಎಂದು ಮುಖ್ಯ ಲೆಕ್ಕಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಚನ್ನಪ್ಪ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.