ADVERTISEMENT

ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ವಿಬಿ-ಜಿ ರಾಮ್ ಜಿ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 3:24 IST
Last Updated 30 ಜನವರಿ 2026, 3:24 IST
ದಾವಣಗೆರೆಯಲ್ಲಿ ನಡೆದ ವಿಬಿ-ಜಿ ರಾಮ್ ಜಿ ಕುರಿತ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು
ದಾವಣಗೆರೆಯಲ್ಲಿ ನಡೆದ ವಿಬಿ-ಜಿ ರಾಮ್ ಜಿ ಕುರಿತ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು   

ದಾವಣಗೆರೆ: ‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಹಳ್ಳಿ ಹಳ್ಳಿಗಳಿಗೂ ತೆರಳಿ ವಿಬಿ-ಜಿ ರಾಮ್ ಜಿ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದ ದಾವಣಗೆರೆ -ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್ ಜಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.‌ 

‘ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕಾಲಕಾಲಕ್ಕೆ ಬದಲಾಯಿಸಲಾಗಿದೆ‌. 2009ರ ಲೋಕಸಭೆ ಚುನಾವಣೆಯ ಲಾಭ ಪಡೆಯಲು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನರೇಗಾ ಯೋಜನೆಗೆ ಮಹಾತ್ಮಗಾಂಧಿ ಹೆಸರನ್ನು ಸೇರಿಸಿತು’ ಎಂದು ಹೇಳಿದರು. 

ADVERTISEMENT

‘ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳಿ ಎಬ್ಬಿಸಿದವರು ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನಾಗಿ ಮಾಡಿಕೊಂಡಿತ್ತು. ಒಂದೇ ಕಾಮಗಾರಿಗೆ ಎರಡೆರೆಡು ಬಿಲ್‌ ಎತ್ತುವಳಿ ಮಾಡುತ್ತಿತ್ತು. ಕೇಂದ್ರ ಸರ್ಕಾರದ ಅನುದಾನ ದುರುಪಯೋಗವಾಗುವುದನ್ನು ತಪ್ಪಿಸಲು ಕಾಯ್ದೆಗೆ ಹೊಸ ರೂಪ ನೀಡಲಾಗಿದೆ’ ಎಂದು ಹೇಳಿದರು. 

‘ವಿಬಿ-ಜಿ ರಾಮ್ ಜಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಎಐ ತಂತ್ರಜ್ಞಾನವನ್ನು ಬಳಸಲಾಗುವುದು. ಕೆಲಸಕ್ಕೆ ಬಂದ ಕಾರ್ಮಿಕರು ಕಾಮಗಾರಿ ಸ್ಥಳದಲ್ಲೇ ಬಯೋಮೆಟ್ರಿಕ್‌ ನೀಡುವಂತೆ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯ ಸರ್ಕಾರ ಜನರ ಹಣದಲ್ಲಿ ಪಕ್ಷದ ಜಾಹೀರಾತು ನೀಡುತ್ತಿದೆ’ ಎಂದು ಟೀಕಿಸಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಎಂ.ಬಸವರಾಜನಾಯ್ಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮುಖಂಡರಾದ ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ಬಿ.ಜೆ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ತುಮ್‌ಕೋಸ್ ಶಿವಕುಮಾರ್, ವೀರೇಶ್ ಹನಗವಾಡಿ, ರಾಜನಹಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಧನಂಜಯ ಕಡ್ಲೇಬಾಳು, ಕೆ.ಎಂ. ಸುರೇಶ್, ಚಂದ್ರಶೇಖರ ಪೂಜಾರ್, ಅಣ್ಣೇಶ್, ಅನಿಲ್‌ಕುಮಾರ್, ಜಯಮ್ಮ ಇತರರಿದ್ದರು.

ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದರೆ ರಾಜ್ಯಕ್ಕೆ ನಷ್ಟವಾಗಲಿದೆ. ಯೋಜನೆಗಳು ಸ್ಥಗಿತವಾದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಉತ್ತರ ನೀಡಬೇಕಾಗುತ್ತದೆ

–ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

ಜಿಲ್ಲೆಯಲ್ಲಿ ಪಕ್ಷದ ಮುಖಂಡರೆಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಮಾಡಿದರೆ 2028ರ ವಿಧಾನಸಭೆ ಚುನಾವಣೆ ಹಾಗೂ 2029ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಬಹುದು

–ಜಿ.ಎಂ.ಸಿದ್ದೇಶ್ವರ ಕೇಂದ್ರದ ಮಾಜಿ ಸಚಿವ

‘ಪಕ್ಷದ ಅಧ್ಯಕ್ಷರೇ ನಮಗೆ ಬಾಸ್‌’

‘ವ್ಯಕ್ತಿಗಿಂತ ಪಕ್ಷ ಮುಖ್ಯ. ನಾನು ಎಂಬುದನ್ನು ಬಿಡಬೇಕು. ಪಕ್ಷದ ಅಧ್ಯಕ್ಷರೇ ನಮಗೆ ಬಾಸ್‌ ಅವರನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.  ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಕೆಲವರು ಅನಗತ್ಯವಾಗಿ ಪ್ರಚಾರ ಮಾಡಿದರು. ದಾವಣಗೆರೆ ದಕ್ಷಿಣ ಉಪಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.