ADVERTISEMENT

ಜಗಳೂರು | ಗಂಗಾಕಲ್ಯಾಣ ಬಡ ರೈತರ ಪಾಲಿನ ಆಶಾಕಿರಣ: ಶಾಸಕ ಬಿ.ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:47 IST
Last Updated 15 ಫೆಬ್ರುವರಿ 2026, 2:47 IST
ಜಗಳೂರಿನಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಫಲಾನುಭವಿಗಳಿಗೆ ಪಂಪ್, ಮೋಟಾರ್‌ಗಳನ್ನು ಬುಧವಾರ ವಿತರಿಸಿದರು
ಜಗಳೂರಿನಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಫಲಾನುಭವಿಗಳಿಗೆ ಪಂಪ್, ಮೋಟಾರ್‌ಗಳನ್ನು ಬುಧವಾರ ವಿತರಿಸಿದರು   

ಜಗಳೂರು: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಕೃಷಿಯಲ್ಲಿ ಆರ್ಥಿಕ ಲಾಭ ಪಡೆಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ಬುಧವಾರ ಸಣ್ಣನೀರಾವರಿ ಇಲಾಖೆಯಿಂದ 25 ಫಲಾನುಭವಿಗಳಿಗೆ ಪಂಪ್,  ಮೋಟಾರ್ ವಿತರಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಗಂಗಾಕಲ್ಯಾಣ ಯೋಜನೆ ಬಡ ರೈತರ ಪಾಲಿಗೆ ಆಶಾಕಿರಣವಾಗಿದೆ. ಉಚಿತ ಕೊಳವೆಬಾವಿ, ಪಂಪ್ ಮೋಟಾರ್, ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸುತ್ತಿದ್ದು, ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ, ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು, ರೈತರಿಗೆ ಒದಗಿಸಿರುವ ಸೌಲಭ್ಯಗಳನ್ನು ಗಮನಿಸಬೇಕು ಎಂದರು.

ADVERTISEMENT

ತಾಲ್ಲೂಕಿನ ಬಿಳಿಚೋಡು ಬಳಿ ₹10‌ ಕೋಟಿ ವೆಚ್ಚದ ಸೇತುವೆ ನಿರ್ಮಾಣ, ₹2 ಕೋಟಿ ವೆಚ್ಚದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗಿದ್ದು, ಅದು ಟೆಂಡರ್ ಹಂತದಲ್ಲಿದೆ. ಬಿದರಕೆರೆ ಸೇರಿದಂತೆ ₹2 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್‌ಸಿ, ಎಸ್‌ಟಿ ಸಮುದಾಯದ ರೈತರು ಸರ್ಕಾರದ ಸಹಾಯಧನ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಹೇಳಿದರು.

ಗುತ್ತಿಗೆದಾರ ಶೇಷಾದ್ರಿ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರಜತ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ಗೌಸ್ ಅಹಮ್ಮದ್, ಮಧುಶಂಕರ್, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.