ADVERTISEMENT

ಜಗಳೂರು | ಶಿಕ್ಷಣದಿಂದ ಸಮಾಜ ಬದಲಾವಣೆ ಸಾಧ್ಯ: ಎನ್.ಓ. ಸುಖಪುತ್ರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 3:08 IST
Last Updated 19 ಜನವರಿ 2026, 3:08 IST
ಜಗಳೂರು ತಾಲ್ಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ನಡೆದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ನಡೆಯಿತು
ಜಗಳೂರು ತಾಲ್ಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ನಡೆದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ನಡೆಯಿತು   

ಜಗಳೂರು: ಸಂವಿಧಾನದ ದೆಸಯಿಂದ ಹಳ್ಳಿಗಾಡಿನ ಬಡ ರೈತನ ಮಕ್ಕಳು ಸಹ ಉನ್ನತ ಸ್ಥಾನಕ್ಕೇರುವ ಅವಕಾಶಗಳಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿಯಾಗಿರುವ ಎನ್.ಓ. ಸುಖಪುತ್ರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಮಲೆಹಳ್ಳಿ ನೌಕರರ ಸಂಘ, ದಂಡಿನ ರಾಜಪ್ಪ ಪರಿವಾರ ಟ್ರಸ್ಟ್, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕಾನೂನು ಜಾಗೃತಿ ಜಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಪ್ರಧಾನವಾಗಿರುವ ಹಳ್ಳಿಗಾಡಿನ ಜನರಾದ ನಮಗೆ ದುಡಿಮೆಯೇ ಮುಖ್ಯ ಕೆಲಸವಾಗಿದ್ದು, ಶಿಕ್ಷಣದ ಕೊರತೆಯಿದೆ. ಸಂವಿಧಾನದಡಿ ಹಲವಾರು ಸೌಲಭ್ಯಗಳು ಸಿಗುತ್ತವೆ. ಇವುಗಳ ಮಾಹಿತಿ ಪಡೆಯುವುದು ಅವಶ್ಯಕ ಎಂದು ತಿಳಿಸಿದರು.

‘ನಾನು ಪಕ್ಕದ ಜಿಲ್ಲೆಯ ಚಿತ್ರದುರ್ಗದಲ್ಲಿ ಕಡುಕಷ್ಟಗಳ ನಡುವೆಯೂ ಶಿಕ್ಷಣ ಪಡೆದು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರಿಶ್ರಮ, ಛಲದಿಂದ ಎದುರಿಸುವ ಮೂಲಕ ತಮಿಳುನಾಡಿನ ವಿಧುರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ , ಗ್ರಾಮೀಣ ಭಾಗದಲ್ಲಿ ವಿಶಿಷ್ಟ ಪ್ರತಿಭೆಗಳಿದ್ದು, ಅವರನ್ನು ಗುರುತಿಸಬೇಕಿದೆ. ಹಳ್ಳಿಗಾಡಿನಿಂದ ಬಂದ ನಾನು ಧಾರವಾಡ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಶಿಕ್ಷಣ ಪ್ರತಿಯೊಬ್ಬರಿಗೂ ಆಸ್ತಿಯಾಗಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಗ್ರಾಮಸ್ಥರ ಸಹಕಾರದಿಂದ ಗ್ರಾಮದಲ್ಲಿ ಜನಪರ ಕಾರ್ಯಕ್ರಮಗಳು ಜರುಗುತ್ತಿವೆ. ಸಾರ್ವಜನಿಕರಲ್ಲಿ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕಾನೂನಿನಡಿ ಪರಿಹಾರಕ್ಕಾಗಿ ಕಾನೂನು ಜಾಗೃತಿ ಮೂಡಿಸಲಾಗುತ್ತಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾ ಎಎಸ್‌ಪಿ ಶಿವಕುಮಾರ್ ಹೇಳಿದರು.

ವೈದ್ಯಾಧಿಕಾರಿ ಡಾ.ರಾಶಿಯಾ ಮಾತನಾಡಿದರು. 

ADVERTISEMENT

ಇದೇ ವೇಳೆ ಧೀಮಂತ್ ರಾಮ್ ನಿರ್ದೇಶನದ ‘ಸಾಮಾಜಿಕ ಅಲೆಯಲಿ ಬದುಕಿನ‌ ರಂಗಕಲೆ’ ಪ್ರದರ್ಶನ ನಡೆಯಿತು. ಚಿತ್ರದುರ್ಗದ ಆಕಾಶವಾಣಿಯ ನವೀನ್ ಮಸ್ಕಾಲ್, ನಿವೃತ್ತ ಡಿವೈಎಸ್.ಪಿ. ಪ್ರಹ್ಲಾದ್ ತಿಮ್ಮಲಾಪುರ, ಬಾಳಪ್ಪ ತಳವಾರ್, ಶಶಿಧರ, ಹೊಂಬಯ್ಯ ಹೊನ್ನಲಗೆರೆ, ಹನುಮಂತಪ್ಪ, ಜಯ್ಯಣ್ಣ, ವಕೀಲ ಅಂಜಿನಪ್ಪ, ಡಿ ಆರ್. ಹನುಮಂತಪ್ಪ, ವೆಂಕಟೇಶ್, ಆರ್.ಜಿ ನಾಗರಾಜ್, ಎಸ್ ಎಚ್. ಹನುಮಂತಪ್ಪ, ಶ್ರೀನಿವಾಸ್, ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.