ಮಾಯಕೊಂಡ: ಸಮೀಪದ ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಕುಂದ ಗ್ರಾಮದಲ್ಲಿ ಜೆಜೆಎಂ ವೈಫಲ್ಯ ಹಾಗೂ ಅಸಮರ್ಪಕ ನೀರು ಪೂರೈಕೆಗೆ ಬೇಸತ್ತು ಖಾಲಿ ಕೊಡ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಳೆಗಾಲದಲ್ಲಿಯೇ ನೀರಿನ ಸಮಸ್ಯೆ ನೀಗಿಸಲಾಗುತ್ತಿಲ್ಲ, ಬೇಸಿಗೆಯಲ್ಲಿ ಏನು ಗತಿ ಏನು? ಜೆಜೆಎಂ ಮೂಲಕ ನೀರು ಸರಬರಾಜು ಮಾಡಿ ಸಮಸ್ಯೆ ನೀಗಿಸಬೇಕಿತ್ತು. ಆದರೆ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರು ಸರಬರಾಜು ಮಾಡದೆ ಜನರಿಗೆ ತೊಂದರೆ ಉಂಟಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಲಜೀವನ್ ಮಿಷನ್ ಅಡಿ ಗ್ರಾಮದಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ನೀರು ಮಾತ್ರ ಮನೆಗಳಿಗೆ ತಲುಪಿಲ್ಲ. ಇದರಿಂದ ಸಮಸ್ಯೆ ವಿಪರೀತ ತಲೆದೋರಿದ್ದು, ನೀರಿಗಾಗಿ ಕಿಮೀ ದೂರದ ಕೆರೆ, ಕಾಲುವೆಗೆ ತೆರಳಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಜೆಜೆಎಂ ಯೋಜನೆ ಅಡಿ ಸಂಪರ್ಕ ನೀಡಿರುವ ನಲ್ಲಿಗಳ ಬದಲಿಗೆ ಹಳೇ ಪೈಪ್ಲೈನ್ಗೆ ನೀರಿನ ಸಂಪರ್ಕ ನೀಡಬೇಕು. ನೀರು ಪೂರೈಕೆ ಮಾಡುವ 6 ಬೋರ್ವೆಲ್ಗಳಿದ್ದರೂ, ಎರಡು ಬೋರ್ಗಳನ್ನು ಮಾತ್ರ ಬಳಸಲಾಗುತ್ತಿದೆ. ಉಳಿದ ಬೋರ್ಗಳಿಂದ ನೀರನ್ನು ಬಿಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಳೆದ ಬೇಸಿಗೆಯಲ್ಲಿ ಇದೆ ಪರಿಸ್ಥಿತಿ ಇತ್ತು. ಈಗ ಮತ್ತೆ ಅದೇ ಸಮಸ್ಯೆ ಆಗಿದ್ದು, ಜಲಜೀವನ ಮಿಷನ್ ಯೋಜನೆಯಿಂದ ಗ್ರಾಮದಲ್ಲಿ ನೀರಿನ ತೊಂದರೆ ನಿವಾರಣೆಯಾಗುವುದಕ್ಕಿಂತ ಹೆಚ್ಚು ಸಮಸ್ಯೆ ತಲೆದೋರಿದೆ. ಆದ್ದರಿಂದ ಕುಡಿಯುವ ನೀರಿನ ಪೂರೈಕೆ ಮಾಡಿಕೊಡಬೇಕು ಎಂದು ಮಂಜುನಾಥ್, ಶಾಂತಪ್ಪ ಹಾಗು ನಲ್ಕುಂದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
'ಎರಡು ಸಾವಿರಕ್ಕು ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ನಮ್ಮ ಗ್ರಾಮದಲ್ಲಿ 6 ಜನ ಗ್ರಾಪಂ ಸದಸ್ಯರಿದ್ದು, ಗ್ರಾಮಕ್ಕೆ ಯಾವುದೇ ಚರಂಡಿ, ರಸ್ತೆ ಬೇಡ. ನೀರು ಮಾತ್ರ ಕೊಡುವಂತೆ ಸಭೆಯಲ್ಲಿ ಮನವಿ ಮಾಡಿದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ರಂಗಸ್ವಾಮಿ.
'ನೀರಿನ ಸಮಸ್ಯೆ ಸಂಬಂಧ ಜೆಜೆಎಂ ಯೋಜನೆ ಇಂಜಿನಿಯರ್ಗಳನ್ನು ಕರೆಯಿಸಿ ಚರ್ಚಿಸಲಾಗಿದ್ದು, ಶೀಘ್ರ ಸಮಸ್ಯೆ ಸರಿಪಡಿಸಲಾಗುವುದು. ಎನ್ನುತ್ತಾರೆ ಅಣಬೇರು ಗ್ರಾಪಂ ಪಿಡಿಒ ವಿದ್ಯಾವತಿ.
'ನಲ್ಕುಂದ ಗ್ರಾಮದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪಂಚಾಯ್ತಿಯಲ್ಲಿ ತುರ್ತು ಸಭೆ ಕರೆದು ಶೀಘ್ರ ಸಮಸ್ಯೆ ಪರಿಹರಿಸಲಾಗುವುದು ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಕೀರಾಬಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.