ADVERTISEMENT

ದಾವಣಗೆರೆ | ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ಶಾಸಕ ಬಸವಂತಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 5:14 IST
Last Updated 27 ಸೆಪ್ಟೆಂಬರ್ 2023, 5:14 IST
ತ್ಯಾವಣಿಗೆ ಸಮೀಪದ ನಲ್ಕದುರೆ ಗ್ರಾಮದಲ್ಲಿ ಮಂಗಳವಾರ ಶಾಸಕ ಕೆ. ಎಸ್. ಬಸವಂತಪ್ಪ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದರು.
ತ್ಯಾವಣಿಗೆ ಸಮೀಪದ ನಲ್ಕದುರೆ ಗ್ರಾಮದಲ್ಲಿ ಮಂಗಳವಾರ ಶಾಸಕ ಕೆ. ಎಸ್. ಬಸವಂತಪ್ಪ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದರು.   

ತ್ಯಾವಣಿಗೆ: ‘ಉದ್ಯೋಗ ಖಾತ್ರಿ ಯೋಜನೆಯನ್ನು ಸರ್ಮಪಕವಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಬೇರೆ ಕಡೆ ತೆರಳಿ’ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಪಿಡಿಒ ಹಾಗೂ ಎಂಜಿನಿಯರ್‌ಗೆ ತಾಕೀತು ಮಾಡಿದರು.

ಸಮೀಪದ ನಲ್ಕುದುರೆ ಗ್ರಾಮದ ವೀರಭದ್ರೇಶ್ವರ ಸಾರ್ವಜನಿಕ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆ ಮತ್ತು ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದಾಖಲೆಯಲ್ಲಿ ತೋರಿಸುವುದು ಮುಖ್ಯವಲ್ಲ. ಕೆಲಸಗಳು ನಡೆಯಬೇಕು. ಕೂಡಲೇ ಉದ್ಯೋಗ ಖಾತ್ರಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿ ವರದಿ ನೀಡಿ’ ಎಂದರು.

ADVERTISEMENT

ಆಗ ಗ್ರಾಮಸ್ಥರು, ‘ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಕೆಲಸ ನಿರ್ವಹಿಸುತ್ತಿಲ್ಲ’ ಎಂದು ಎಂಜಿನಿಯರ್‌ ಮೇಲೆ ಮುಗಿಬಿದ್ದರು. ‘ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಜಾಗ ಖಾಲಿ ಮಾಡಿ’ ಎಂದು ಉದ್ಯೋಗ ಖಾತ್ರಿ ಎಂಜಿನಿಯರ್‌ಗೆ ತಿಳಿಸಿದರು.

‘ಗ್ರಾಮದ ಶಾಲೆ ಕಾಪೌಂಡ್ ಮತ್ತು ಹೊಸ ಕೊಠಡಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಹಳೆಯ ವಸ್ತುಗಳನ್ನು ಹೊಸ ಕೊಠಡಿಗೆ ಜೋಡಿಸಿದ್ದಾರೆ. 2 ದಿನಗಳಲ್ಲಿ ಗುತ್ತಿಗೆದಾರರ ಮೂಲಕ ಕೆಲಸ ನಿರ್ವಹಿಸಿ ನಮಗೆ ವರದಿ ನೀಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇಒಗೆ ಶಾಸಕರು ಸೂಚಿಸಿದರು.

‘ಜಲಜೀವನ ಮಿಷನ್ ಯೋಜನೆ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ್ದು, ಗ್ರಾಮದ ರಸ್ತೆಗಳು ಗುಂಡಿಯಂತಾಗಿವೆ. ಕೂಡಲೇ ಸರಿಪಡಿಸಬೇಕು. ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಶ್ವತ್, ತಾಲ್ಲೂಕು ಪಂಚಾಯಿತಿ ಇಒ ಉತ್ತಮ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷೆ ಆಶಾ, ಸದಸ್ಯರು ಇದ್ದರು.

ಸಭೆಯಲ್ಲಿ ಗಲಾಟೆ

‘ಗ್ರಾಮದ ಸಾರ್ವಜನಿಕ ಸಮುದಾಯ ಭವನವನ್ನು ಮೇಲ್ವರ್ಗದವರು ಸುಮಾರು ₹ 45000ಕ್ಕೆ ಬಾಡಿಗೆ ನೀಡುತ್ತಿದ್ದು ಅನ್ಯಾಯವಾಗುತ್ತಿದೆ. ನಾವೆಲ್ಲ ದೇಣಿಗೆ ನೀಡಿ ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲಾಗಿದೆ’ ಎಂದು ಹೇಳಿದ ಗ್ರಾಮಸ್ಥರು ಏಕಾಏಕಿ ವೇದಿಕೆ ಮುಂಭಾಗ ತೆರಳಿದರು. ಆಗ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ಸಂಭವಿಸಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ‘ಈ ಬಗ್ಗೆ ಪಿಡಿಒಗೆ ಸಮರ್ಪಕ ಉತ್ತರ ನೀಡುವಂತೆ ನೋಟಿಸ್ ನೀಡಲಾಗಿತ್ತು’ ಎಂದು ತಹಶೀಲ್ದಾರ್ ಸಭೆಯಲ್ಲಿ ತಿಳಿಸಿದರು. ‘ಪಿಡಿಒ ಸರಿಯಾಗಿ ವಿಷಯ ತಿಳಿಸಿಲ್ಲ. ಕೂಡಲೇ 15 ದಿನದೊಳಗೆ ಕಮಿಟಿ ರಚನೆ ಮಾಡಿ ಸರಿಪಡಿಸಲಾಗುವುದು’ ಎಂದು ತಹಶೀಲ್ದಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.