
ಮಲೇಬೆನ್ನೂರು: ಸಮೀಪದ ಜಿಗಳಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಚಳಿಗಾಳಿ ಹಿತಾನುಭವದ ನಡುವೆ ವೈಭವದಿಂದ ನಡೆಯಿತು.
ಸಾಂಪ್ರದಾಯಿಕ ಪೂಜಾವಿಧಾನಗಳ ನಂತರ, ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಂತರ ರಥಾರೋಹಣವಾಯಿತು.
ಗಣೇಶಪೂಜೆ, ಬಲಿದಾನ, ಚಕ್ರಪೂಜೆ ಮಾಡಿದ ನಂತರ ರಥವನ್ನು ‘ರಂಗನಾಥ ಸ್ವಾಮಿ ಗೋವಿಂದ’ ಎಂದು ಉದ್ಘೋಷ ಕೂಗುತ್ತ ಭಕ್ತ ಸಮೂಹ ರಥ ಎಳೆದು ಭಕ್ತಿ ಸಮರ್ಪಣೆ ಮಾಡಿತು.
ಸಂಪ್ರದಾಯದ ಪ್ರಕಾರ ಗಜ ಉತ್ಸವ, ಶಸ್ತ್ರ ಹಾಕುವ ಆಚರಣೆಗಳನ್ನು ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯಲವಟ್ಟಿ, ಗುಡ್ಡದ ಬೇವಿನಹಳ್ಳಿ ಆಂಜನೇಯ, ಸ್ಥಳೀಯ ಬೀರಲಿಂಗೇಶ್ವರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವು. ರಥವನ್ನು ಬಣ್ಣಬಣ್ಣದ ಪಟ, ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು. ಮುಖ್ಯವೃತ್ತಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದರು.
ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲು, ಕಹಳೆ ನಿನಾದ, ದಾಸ ಸಮುದಾಯದ ಜಾಗಟೆ ಮೇಳ, ಪುರವಂತರ ವೀರಭದ್ರದೇವರ ಕುಣಿತ, ಗೋರಪ್ಪ ಗೋರಮ್ಮ, ಜಾನಪದ ಕಲಾತಂಡ, ಉತ್ಸವಕ್ಕೆ ಮೆರಗು ತಂದಿದ್ದವು.
ಜವುಳ, ಹರಕೆ, ಮುದ್ರಾಧಾರಣೆ ಮಾಡಿದರು. ಗೋಧೂಳಿ ಸಮಯದಲ್ಲಿ ಓಕುಳಿಯಾಟ ನಡೆಯಿತು. ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು. ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.