ADVERTISEMENT

ದಾವಣಗೆರೆ: ವರದಿಗಾರರ ಕೂಟಕ್ಕೆ ಶೀಘ್ರ ನಿವೇಶನ

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:56 IST
Last Updated 30 ಆಗಸ್ಟ್ 2025, 7:56 IST
ದಾವಣಗೆರೆಯ ಜಿಲ್ಲಾ ವರದಿಗಾರರ ಕೂಟದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರೊಂದಿಗೆ ಪತ್ರಕರ್ತರು
ದಾವಣಗೆರೆಯ ಜಿಲ್ಲಾ ವರದಿಗಾರರ ಕೂಟದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರೊಂದಿಗೆ ಪತ್ರಕರ್ತರು   

ದಾವಣಗೆರೆ: ಜಿಲ್ಲಾ ವರದಿಗಾರರ ಕೂಟಕ್ಕೆ ಶೀಘ್ರವೇ ನಿವೇಶನ ಒದಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ವರದಿಗಾರರ ಕೂಟದಲ್ಲಿ 8ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಶುಕ್ರವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಕೂಟದ ಮನವಿಯನ್ನು ಪರಿಗಣಿಸಿ ಹಲವು ನಿವೇಶನಗಳನ್ನು ಪರಿಶೀಲನೆ ಮಾಡಲಾಗಿದೆ. ನಗರದ ಮಧ್ಯ ಭಾಗದಲ್ಲೇ ಕೂಟಕ್ಕೆ ನಿವೇಶನ ಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರೊಂದಿಗೆ ಚರ್ಚಿಸಿ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರವೂ ಇದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಸಮಾಜದ ಆಗುಹೋಗು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಕೂಟದ ಉಪಾಧ್ಯಕ್ಷ ಸಿದ್ದಯ್ಯ ಹಿರೇಮಠ, ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಬೆಳಗಾವಿ ಹಿರಿಯ ಪತ್ರಕರ್ತ ಹೃಷಿಕೇಶ ಬಹಾದ್ದೂರ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ, ಕಾರ್ಯದರ್ಶಿಗಳಾದ ಬಿ.ಸಿಕಂದರ್, ಎಚ್.ಎಂ.ಪಿ. ಕುಮಾರ್‌, ಕೆ.ಎನ್.‌ ಮಲ್ಲಿಕಾರ್ಜುನ ಮೂರ್ತಿ, ಸಂಜಯ್ ಕುಂದುವಾಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.