ಚನ್ನಗಿರಿ: ‘ನಾಡು ಉಳಿಯಬೇಕಾದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ಆ ಮೂಲಕ ನಾವು ಕನ್ನಡಮುಖಿಗಳಾಗಬೇಕು’ ಎಂದು ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ನುಡಿ ಸಿರಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ಶಿಕ್ಷಣ ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮಾಡಬೇಕು. ಇಂದು ವಿಜ್ಞಾನ, ಮಾಹಿತಿ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚು ಇಂಗ್ಲಿಷ್ ಬಳಕೆಯಾಗುತ್ತಿದೆ. ನಮ್ಮ ಕನ್ನಡ ಉಳಿಯಬೇಕೆಂದರೆ ನಮ್ಮ ಪ್ರಯತ್ನವೂ ಕನ್ನಡಮುಖಿಯಾಗಿರಬೇಕು ಎಂದರು.
ಸೈನಿಕರು ನಾಡ ರಕ್ಷಣೆಗೆ ದುಡಿದರೆ, ಆಯಾ ಭಾಷಿಕರು ಅವರ ಭಾಷೆಯನ್ನು ರಕ್ಷಿಸುವ ಸಲುವಾಗಿ ದುಡಿಯಬೇಕು. ಬೇರೆ ಭಾಷೆಗಳನ್ನು ಗೌರವಿಸುವ ಜೊತೆಗೆ ನಮ್ಮನ್ನು ನಾವು ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ತಾಂತ್ರಿಕ, ಸಾಹಿತ್ಯಾತ್ಮಕ ಹಾಗೂ ಆಡಳಿತ್ಯಾತ್ಮಕವಾಗಿ ಮುಂತಾದ ಕ್ಷೇತ್ರಗಳಲ್ಲಿ ಕನ್ನಡನಾಡು ನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಎಲ್.ಜಿ. ಮಧುಕುಮಾರ್ ಹೇಳಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಉಜ್ಜನಪ್ಪ, ಮಹಾರುದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಕೆ.ಎಸ್. ವೀರೇಶ್ ಪ್ರಸಾದ್, ಓಂಕಾರನ್, ಜಯದೇವಯ್ಯ, ಹೋಬಳಿ ಘಟಕದ ಕಸಾಪ ಅಧ್ಯಕ್ಷ ಜಿ. ಚಿನ್ನಸ್ವಾಮಿ, ಓಂಕಾರಮೂರ್ತಿ, ರಾಮಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.