ADVERTISEMENT

ಬರೆದಂತೆ ಬದುಕಿದ ಬಂಡಾಯ ಸಾಹಿತಿ ಪ್ರೊ. ಚಂಪಾ

ಶಿಕ್ಷಣ ತಜ್ಞ ಡಾ. ಎಂ.ಜಿ ಈಶ್ವರಪ್ಪ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:06 IST
Last Updated 12 ಜನವರಿ 2022, 5:06 IST
ದಾವಣಗೆರೆ ಕುವೆಂಪು ಕನ್ನಡ ಭವನ ಸಾಹಿತಿ ಚಂದ್ರಶೇಖರ್ ಪಾಟೀಲ್‍ ಅವರಿಗೆ ನುಡಿನಮನಸಲ್ಲಿಸಲಾಯಿತು
ದಾವಣಗೆರೆ ಕುವೆಂಪು ಕನ್ನಡ ಭವನ ಸಾಹಿತಿ ಚಂದ್ರಶೇಖರ್ ಪಾಟೀಲ್‍ ಅವರಿಗೆ ನುಡಿನಮನಸಲ್ಲಿಸಲಾಯಿತು   

ದಾವಣಗೆರೆ: ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗಲೆಲ್ಲ ಬೀದಿಗಿಳಿದು ಹೋರಾಟ ಮಾಡಬಲ್ಲ ಮತ್ತು ಕನ್ನಡದ ನೆಲ ಜಲ ಸಂರಕ್ಷಣೆಗಾಗಿ ಜೈಲಿಗೂ ಹೋಗಿ ಬಂದ ಹೋರಾಟಗಾರ ಚಂಪಾ. ಅವರು ತಮ್ಮ ಮೊನಚಾದ ಬರವಣಿಗೆಯ ಮೂಲಕ ಸಮಾಜದಲ್ಲಿರುವ ಮೌಢ್ಯವನ್ನು ನೇರವಾಗಿ ವಿರೋಧಿಸುವ ಎದೆಗಾರಿಕೆ ಇದ್ದವರು ಎಂದು ಶಿಕ್ಷಣ ತಜ್ಞ ಡಾ. ಎಂ.ಜಿ ಈಶ್ವರಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕುವೆಂಪು ಕನ್ನಡ ಭವನದಲ್ಲಿ ನಡೆದ ಸಾಹಿತಿ ಚಂದ್ರಶೇಖರ್ ಪಾಟೀಲ್‍ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯವಸ್ಥೆಯೊಡನೆ ಎಂದೂ ಒಪ್ಪಂದ ಮಾಡಿಕೊಳ್ಳದಿರುವ ಅಪರೂಪದ ವ್ಯಕ್ತಿತ್ವ ಅವರದು. ದಾವಣಗೆರೆ ಮತ್ತು ಹರಿಹರಕ್ಕೆ ನಿಕಟ ಸಂಪರ್ಕ ಹೊಂದಿದ್ದರು. ನೇರ ನುಡಿಯ ಬಂಡಾಯ ಸಾಹಿತಿ ತಾವು ಬರೆದಂತೆ ಬದುಕಿ ತೋರಿಸಿದ ವ್ಯಕ್ತಿತ್ವ ಅವರದು. ಅವರ ವಿಡಂಬನಾತ್ಮಕ ಬರವಣಿಗೆಯಲ್ಲಿ ಹಾಸ್ಯವು ಇರುತ್ತಿತ್ತು ಎಂದು ತಿಳಿಸಿದರು.

ADVERTISEMENT

ವೀರಶೈವ ಜನಾಂಗದಲ್ಲಿ ಹುಟ್ಟಿದರೂ ಕೂಡ ವೀರಶೈವ ಸಂಪ್ರದಾಯದಲ್ಲಿರುವ ಮೌಢ್ಯಗಳನ್ನು ವಿರೋಧಿಸುತ್ತಿದ್ದರು. ವೈಚಾರಿಕ ಪ್ರಜ್ಞೆ ಸದಾ ಅವರಲ್ಲಿ ಜಾಗೃತವಾಗಿರುತ್ತಿತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ನೆನಪಿಸಿಕೊಂಡರು.

ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ, ಪತ್ರಕರ್ತ ಬಿ.ಎನ್. ಮಲ್ಲೇಶ್, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಡಾ. ಮಲ್ಲಿಕಾರ್ಜುನ್ ಕಲಮರಹಳ್ಳಿ ನುಡಿನಮನ ಸಲ್ಲಿಸಿದರು.

ಡಾ. ಎಂ. ಮಂಜಣ್ಣ, ಬಿ. ದಿಳ್ಳೆಪ್ಪ, ಸುಮತಿ ಜಯಪ್ಪ, ರುದ್ರಾಕ್ಷಿಬಾಯಿ, ಮಲ್ಲಮ್ಮ, ದಾಗಿನಕಟ್ಟೆ ಪರಮೇಶ್ವರಪ್ಪ, ಕೆ. ಕೆಂಚನಗೌಡ, ಎಸ್.ಆರ್ ಅಜ್ಜಪ್ಪ, ಜಿ.ಎಂ ನಾಗರಾಜ್, ಬಿ.ಎಸ್. ಜಗದೀಶ್, ಶಿವಲಿಂಗಯ್ಯ ಎಂ ಷಡಾಕ್ಷರಪ್ಪ, ಬಿ.ಎಂ ಮುರಿಗೆಯ್ಯ, ನಾಗವೇಣಿ ಎ.ಎಲ್., ವೀಣಾ ಕೃಷ್ಣಮೂರ್ತಿ, ಶೈಲಜಾದೇವಿ, ಎಚ್.ಎಂ. ಸದಾನಂದ, ಎ. ಸಿದ್ದಲಿಂಗನಗೌಡ ಅವರೂ ಇದ್ದರು. ನಿಯೋಜಿತ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.