
ಜಗಳೂರು: ದೇಶದ ಪಂಚ ಪೀಠಗಳಲ್ಲಿ ಪ್ರಮುಖವಾಗಿರುವ ಉತ್ತರಾಖಂಡದ ಹಿಮವದ್ ಕೇದಾರ ಪೀಠದ ಉತ್ತರಾಧಿಕಾರಿಯಾಗಿ ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ಪಟ್ಟಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇಮಕಗೊಂಡಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ ಈಚೆಗೆ ಜರುಗಿದ ಕೇದಾರ ಪೀಠದ ಜಗದ್ಗುರು ಭೀಮಾಶಂಕರ ಲಿಂಗ ಸ್ವಾಮೀಜಿ ಪೀಠಾರೋಹಣದ ರಜತ ಮಹೋತ್ಸವ ಸಮಾರಂಭದಲ್ಲಿ ಇವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಲಾಯಿತು.
ಗುರು ದಶಮುಖ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಹಾಯಜ್ಞ ಹಾಗೂ ಪಟ್ಟಾಷೇಕದ ರಜತ ಮಹೋತ್ಸವದಲ್ಲಿ ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ಶಿವಾಚಾರ್ಯರು ಮತ್ತು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಈ ಮಹತ್ವದ ವಿಷಯವನ್ನು ಪ್ರಕಟಿಸಿದ ಭೀಮಾಶಂಕರ ಲಿಂಗ ಮಹಾಸ್ವಾಮೀಜಿ, ನೂತನ ಉತ್ತರಾಧಿಕಾರಿಗೆ ಶುಭ ಹಾರೈಸಿದರು.
ಉತ್ತರಾಖಂಡದ ನಾಲ್ಕು ದೇವಸ್ಥಾನಗಳಾದ ಕೇದಾರ, ಮಧ್ಯಮ ಮಹದೇಶ್ವರ, ಓಂಕಾರೇಶ್ವರ ಹುಕ್ಕಿಮಠ ಹಾಗೂ ತುಂಗನಾಥ ದೇವಸ್ಥಾನಗಳಲ್ಲಿ, ಪ್ರತಿಕೂಲ ಹವಾಮಾನದಲ್ಲೂ 2016ರಿಂದ ಕೇದಾರ ಪೀಠದ ಶಿಷ್ಯರಾಗಿ 9 ಪೂಜಾ ಅನುಷ್ಠಾನ ಕಾರ್ಯಗಳಲ್ಲಿ ಕಣ್ವಕುಪ್ಪೆ ಶ್ರೀಗಳು ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ, ವಿದೇಶಗಳ ಗಣ್ಯರು ಪಾಲ್ಗೊಂಡ ಪೂಜಾ ಕೈಂಕರ್ಯಗಳ ನೇತೃತ್ವವನ್ನು ಯಶಸ್ವಿಯಾಗಿ ವಹಿಸಿಕೊಂಡು 10ಕ್ಕೂ ಹೆಚ್ಚು ವರ್ಷಗಳ ಕಾಲ ಅನುಷ್ಠಾನ ಮಾಡಿದ್ದಾರೆ.
ಉತ್ತರಾಖಂಡದ ಹುಕ್ಕಿಮಠದಲ್ಲಿ ಪಟ್ಟಾಧಿಕಾರದ ದಿನಾಂಕ ಘೋಷಣೆಯಾಗಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಹಿನ್ನೆಲೆ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಗಡಿ ಗ್ರಾಮ ಚಿಕ್ಕಮಾಗಡಿಯಲ್ಲಿ ಜನಿಸಿದ ಶ್ರೀಗಳು, ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪ್ರಾಥಮಿಕ, ಡಿಪ್ಲೊಮಾ ಹಾಗೂ ಬಿ.ಎ. ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ಹಿಂದಿನ ಶ್ರೀಗಳು ಧೈವಾಧೀನರಾಗಿದ್ದರಿಂದ ಪಂಚಪೀಠಗಳ ಆದೇಶದಂತೆ ಜೂನ್ 12, 2005ರಲ್ಲಿ ಕಣ್ವಕುಪ್ಪೆ ಗವಿಮಠದ ಸ್ವಾಮೀಜಿಯಾಗಿ ಪಟ್ಟಾಭಿಷೇಕವಾಯಿತು. ಮೂಲ ಸೌಕರ್ಯಗಳಿಲ್ಲದೇ ಗುಡ್ಡದ ಪ್ರದೇಶದಲ್ಲಿದ್ದ ಮಠದಲ್ಲಿ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಠದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
‘ಭಗವಂತನ ಅನುಗ್ರಹದಿಂದ ಮಹತ್ತರವಾದ ಧರ್ಮ ಕಾರ್ಯದ ಸದಾವಕಾಶ ಲಭಿಸಿದೆ. ಭಕ್ತರ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಮಾನವ ಕುಲದ ಒಳಿತಿಗಾಗಿ ಧಾರ್ಮಿಕ ಕೈಂಕರ್ಯ ಮುಂದುವರೆಯಲಿದೆ’ ಎಂದು ಕೇದಾರ ಪೀಠದ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.