ADVERTISEMENT

ಚನ್ನಗಿರಿ ಕ್ಷೇತ್ರ ಸ್ಥಿತಿ–ಗತಿ: ಕೊನೇ ಹಂತಕ್ಕೆ ತಲುಪಿದ ಮಾಡಾಳ್‌, ವಡ್ನಾಳ್ ಪರ್ವ

ಹೊಸಮುಖಗಳನ್ನು ಕಾಣಲಿರುವ ಚನ್ನಗಿರಿ ಕ್ಷೇತ್ರ | ಹಲವು ಆಕಾಂಕ್ಷಿಗಳು

ಬಾಲಕೃಷ್ಣ ಪಿ.ಎಚ್‌
Published 17 ಜನವರಿ 2023, 8:54 IST
Last Updated 17 ಜನವರಿ 2023, 8:54 IST
ಚನ್ನಗಿರಿ ವಿಧಾನಸಭಾ ಕ್ಷೇತ್ರ
ಚನ್ನಗಿರಿ ವಿಧಾನಸಭಾ ಕ್ಷೇತ್ರ   

ದಾವಣಗೆರೆ: ಅಡಿಕೆ ನಾಡು ಎಂದು ಪ್ರಸಿದ್ಧವಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿ ಹಲವು ವರ್ಷಗಳಿಂದ ಪರಸ್ಪರ ಸೆಣಸಾಡುತ್ತಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಅವರ ರಾಜಕೀಯ ಪರ್ವ ಸಂಧ್ಯಾಕಾಲಕ್ಕೆ ತಲುಪಿದೆ. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಹೊಸಮುಖಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಅಲ್ಲದೇ ಜೆಡಿಎಸ್‌ನಿಂದ ಹಿಂದಿನ ಮೂರು ಚುನಾವಣೆಗಳಲ್ಲಿ ಕಣಕ್ಕಿಳಿದು ಪ್ರಬಲ ಸ್ಪರ್ಧೆ ಒಡ್ಡಿದ್ದ ಹೊದಿಗೆರೆ ರಮೇಶ್‌ ಈಗ ಕಾಂಗ್ರೆಸ್‌ ಸೇರಿರುವುದರಿಂದ ಜೆಡಿಎಸ್‌ನಿಂದಲೂ ಹೊಸಮುಖ ಕಾಣಲಿದೆ.

ಮಾಡಾಳ್‌ ವಿರೂಪಾಕ್ಷಪ್ಪ 2004ರಲ್ಲಿ ಮೊದಲ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಸೋತರೂ 2008ರಲ್ಲಿ ಗೆಲ್ಲುವ ಮೂಲಕ ಚನ್ನಗಿರಿಯಲ್ಲಿ ಕಮಲ ಅರಳುವಂತೆ ಮಾಡಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ವಡ್ನಾಳ್‌ ರಾಜಣ್ಣರಿಗೆ ನಿಕಟಸ್ಪರ್ಧೆ ಒಡ್ಡಿದರೂ ಗೆಲುವು ಸಾಧ್ಯವಾಗಿರಲಿಲ್ಲ. 2018ರಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದು ಭಾರಿ ಅಂತರದಿಂದ ಗೆದ್ದಿದ್ದರು. ಅವರಿಗೆ ಈಗಲೂ ಚುನಾವಣೆಯಲ್ಲಿ ಸ್ಪರ್ಧಿಸುವ ಹುಮ್ಮಸ್ಸು ಇದೆ. ಆದರೆ, ಬಿಜೆಪಿಯಲ್ಲಿ 75 ವರ್ಷ ಆದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ನಿಯಮ ಅನ್ವಯವಾದರೆ ಮಾಡಾಳ್‌ ಅವರಿಗೆ ಸ್ಪರ್ಧಿಸಲು ಈ ಬಾರಿ ಅವಕಾಶ ಸಿಗುವುದಿಲ್ಲ. ಆ ಕಾರಣಕ್ಕಾಗಿಯೇ ಅವರ ಮಗ ಮಾಡಾಳ್‌ ಮಲ್ಲಿಕಾರ್ಜುನ ಆಕಾಂಕ್ಷಿಯಾಗಿ ಓಡಾಡುತ್ತಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳುತ್ತಲೇ ತಮ್ಮ ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸಿರುವ ಅನೇಕ ನಿದರ್ಶನಗಳು ಇರುವುದರಿಂದ ವಿರೂಪಾಕ್ಷಪ್ಪ ಕೂಡ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

ತುಮ್ಕೋಸ್‌ ಮಾಜಿ ಅಧ್ಯಕ್ಷ ಶಿವಕುಮಾರ್‌ ಅವರೂ ಇನ್ನೊಂದು ಕಡೆಯಿಂದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಜತೆಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು ಅವರೂ ಆಕಾಂಕ್ಷಿಯಾಗಿದ್ದಾರೆ.

ADVERTISEMENT

ವಡ್ನಾಳ್ ರಾಜಣ್ಣ ಅವರು ಬಿಜೆಪಿ ಮೂಲಕವೇ ರಾಜಕಾರಣಕ್ಕೆ ಬಂದವರು. 1994ರಲ್ಲಿ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಜನತಾದಳದ ಜೆ.ಎಚ್‌.ಪಟೇಲ್, ಕಾಂಗ್ರೆಸ್‌ನ ಎನ್.ಜಿ. ಹಾಲಪ್ಪ ಅವರಿಗೆ ಸ್ಪರ್ಧೆಯೊಡ್ಡಿದ್ದರು. ಗೆಲುವು ಪಟೇಲರ ಪಾಲಾಗಿತ್ತು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜೆ.ಎಚ್‌. ಪಟೇಲರನ್ನು ಸೋಲಿಸಿ ರಾಜ್ಯದಾದ್ಯಂತ ಮನೆಮಾತಾದರು. ಬಳಿಕ ಕಾಂಗ್ರೆಸ್‌ ಸೇರಿದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ನ ಮಹಿಮ ಪಟೇಲ್‌ ಜಯಗಳಿಸಿ, ವಡ್ನಾಳ್‌ ಎರಡನೇ ಸ್ಥಾನಕ್ಕೆ ಸೀಮಿತರಾದರು. 2008ರಲ್ಲಿಯೂ ಎರಡನೇ ಸ್ಥಾನಕ್ಕೇ ತೃಪ್ತಿಪಡಬೇಕಾಯಿತು. ವಿರೂಪಾಕ್ಷಪ್ಪರ ಮೂಲಕ ಬಿಜೆಪಿ ಖಾತೆ ತೆರೆಯಿತು. 2013ರಲ್ಲಿ ವಡ್ನಾಳ್‌ ಎರಡನೇ ಬಾರಿಗೆ ಶಾಸಕರಾದರು. 2018ರಲ್ಲಿ ಮತ್ತೆ ಸೋತರು. ಹೀಗೆ ಸೋಲು–ಗೆಲುವುಗಳ ರಾಜಕಾರಣದಲ್ಲಿ ಸಾಗಿದ್ದ ಅವರು ಈಗ ವಯಸ್ಸಿನ ಕಾರಣಕ್ಕೆ ಹಿಂದಕ್ಕೆ ಸರಿದಿದ್ದಾರೆ. ಅವರ ಕುಟುಂಬದಿಂದ ವಡ್ನಾಳ್‌ ಅಶೋಕ್‌, ವಡ್ನಾಳ್‌ ಜಗದೀಶ್‌ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಹೊದಿಗೆರೆ ರಮೇಶ್‌ ಸತತ ಮೂರು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ 2008ರಲ್ಲಿ 21,000, 2013ರಲ್ಲಿ 28,000, 2013ರಲ್ಲಿ 29,000ಕ್ಕಿಂತ ಅಧಿಕ ಮತಗಳನ್ನು ಪಡೆದು ಛಾಪು ಮೂಡಿಸಿದ್ದರು. ಈಗ ಕಾಂಗ್ರೆಸ್‌ ಸೇರಿರುವ ಅವರು ಟಿಕೆಟ್‌ಗಾಗಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಗತಿಪರ ಸಂಘಟನೆಗಳಲ್ಲಿ ಮತ್ತು ರೈತ ಪರ ಹೋರಾಟಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ತೇಜಸ್ವಿ ವಿ. ಪಟೇಲ್‌ ಅವರು 2008ರಲ್ಲಿ ಸ್ವರ್ಣಯುಗ ಪಾರ್ಟಿಯಿಂದ ಹರಿಹರದಲ್ಲಿ ಸ್ಪರ್ಧಿಸಿದ್ದರು. ಬಳಿಕ ಕಾರಿಗನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದು ಬಂದಿದ್ದರು. ಅವರೂ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು.

ಕಿಸಾನ್‌ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ್‌ ಶಿವಗಂಗಾ ಅವರು ಕ್ಷೇತ್ರದಾದ್ಯಂತ ಕೆಲವು ವರ್ಷಗಳಿಂದ ಓಡಾಡುತ್ತಿದ್ದು, ಬಿಜೆಪಿಗೆ ಮಾರುತ್ತರ ನೀಡುತ್ತಾ ಬಂದವರು. ಅವರು ಈ ಬಾರಿ ಟಿಕೆಟ್‌ ಪಡೆಯಲೇಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಉಳಿದಂತೆ ಎಚ್‌.ಎನ್‌. ನಿರಂಜನ್‌, ಲಿಂಗರಾಜು ಜಿ.ಎಸ್‌., ಪುನೀತ್‌ ಕುಮಾರ್‌ ಕೂಡ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿರುವುದರಿಂದ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದೇ ಕಾಂಗ್ರೆಸ್‌ ನಾಯಕರಿಗೆ ಸವಾಲಾಗಿದೆ.

ಕಾಂಗ್ರೆಸ್‌ನಲ್ಲಿದ್ದ ಎಂ. ಯೋಗೇಶ್ ಕೆಲವು ವರ್ಷಗಳ ಹಿಂದೆ ಜೆಡಿಎಸ್‌ ಸೇರಿದ್ದರು. ಜೆಡಿಎಸ್‌ಗೆ ತನ್ನದೇ ಆದ ಮತ ಇರುವ ಈ ಕ್ಷೇತ್ರದಲ್ಲಿ ಯೋಗೇಶ್‌ ಅಭ್ಯರ್ಥಿ ಎಂದು ಜೆಡಿಎಸ್‌ ರಾಜ್ಯ ನಾಯಕರು ಘೋಷಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ (ಕೆಆರ್‌ಎಸ್‌) ದೋಣಿಹಳ್ಳಿ ಮಂಜುನಾಥ ಗೌಡ, ಆಮ್‌ ಆದ್ಮಿ ಪಾರ್ಟಿಯ (ಎಎಪಿ) ರವಿಕುಮಾರ್‌ ಪಾಟೀಲ್‌, ಪ್ರಜಾಕೀಯ ಪಕ್ಷದ ಚಂದ್ರಶೇಖರ್‌ ಸಹಿತ ಅನೇಕರು ವಿವಿಧ ಪಕ್ಷಗಳಿಂದ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

***

ಚನ್ನಗಿರಿಯಲ್ಲಿ ಮಾಡಾಳ್‌ ಕುಟುಂಬ ಮತ್ತು ಇನ್ನಿಬ್ಬರು ಆಕಾಂಕ್ಷಿಗಳಿದ್ದಾರೆ. ಯಾರು ಅಭ್ಯರ್ಥಿ ಎಂಬುದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ.
- ಎಸ್‌.ಎಂ. ವೀರೇಶ್‌ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಚನ್ನಗಿರಿಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬಯಸಿ 8 ಮಂದಿ ಅರ್ಜಿ ಸಲ್ಲಿಸಿದ್ದರೂ ನಾಲ್ಕು ಮಂದಿಯ ನಡುವೆ ಪೈಪೋಟಿ ಇದೆ. ಅವರಲ್ಲಿ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ.
- ಎಚ್‌.ಬಿ. ಮಂಜಪ್ಪ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

ಚನ್ನಗಿರಿಯಲ್ಲಿ ಜೆಡಿಎಸ್‌ಗೆ ತನ್ನದೇ ಆದ ಮತಗಳಿವೆ. ಜೆಡಿಎಸ್ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರುವ ಕ್ಷೇತ್ರ ಇದು. ಯೋಗೇಶ್‌ ಉತ್ತಮ ಅಭ್ಯರ್ಥಿಯಾಗಿದ್ದಾರೆ.
- ಬಿ. ಚಿದಾನಂದಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.