ಹೊನ್ನಾಳಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ರಾಜ್ಯದಲ್ಲಿ ಯಾವ್ಯಾವ ಜಾತಿಗಳಿವೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ₹ 400 ಕೋಟಿ ಖರ್ಚು ಮಾಡಿ ಮಾಡುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ವ್ಯರ್ಥವಾಗಬಾರದು’ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಸಾಧು ವೀರಶೈವ ಸಮಾಜ ಹಮ್ಮಿಕೊಂಡಿದ್ದ ಭಕ್ತಿ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಹಿಂದುಳಿದ ವರ್ಗಗಳ ಆಯೋಗ ಮೊದಲು ನಿರ್ದಿಷ್ಟವಾದ ಜಾತಿಗಳನ್ನು ಸಮೀಕ್ಷೆ ನಡೆಸಿ ಸಾರ್ವಜನಿಕವಾಗಿ ಪ್ರಕಟಿಸಲಿ. ಇದರಿಂದ ಜನರಿಗೆ ತಾವು ಯಾವ ಜಾತಿ, ಧರ್ಮಕ್ಕೆ ಸೇರಿದವರು ಎಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬಹುದೊಡ್ಡ ಗೊಂದಲ ಉಂಟಾಗಲಿದೆ’ ಎಂದು ಹೇಳಿದರು.
‘ಆಯೋಗದ ಕೋಡ್ ನಂ 18 ರಲ್ಲಿ ಅಕ್ಕಸಾಲಿ ಲಿಂಗಾಯತ ಎಂದು, ಮತ್ತೊಂದು ಕಡೆ ಲಿಂಗಾಯತ ಅಕ್ಕಸಾಲಿ ಎಂದು ನಮೂದು ಮಾಡಿದೆ. ಇದರಲ್ಲಿ ಯಾವುದನ್ನು ಬರೆಸಬೇಕು ಎಂದು ಈ ಜಾತಿಯ ಜನರಿಗೆ ಗೊಂದಲ ಉಂಟಾಗಿದೆ. ಅದೇ ರೀತಿ ಕೋಡ್ 1079 ರಲ್ಲಿ ರೆಡ್ಡಿ ಲಿಂಗಾಯತ ಎಂದು, 1107 ರಲ್ಲಿ ರಡ್ಡಿ ಲಿಂಗಾಯತ್ ಎಂದು ಇದೆ. ಕೋಡ್ 792 ರಲ್ಲಿ ಲಿಂಗಾಯತ ವೀರಶೈವ ಇದೆ. 1366 ರಲ್ಲಿ ವೀರಶೈವ ಲಿಂಗಾಯತ ಎಂದಿದೆ. ಇದರಲ್ಲಿ ಯಾವುದನ್ನು ಬರೆಸಬೇಕು ಎಂದು ಆಯೋಗದ ಅಧ್ಯಕ್ಷರು ಉತ್ತರಿಸಬೇಕು ಎಂದರು.
‘ಕೋಡ್ 975 ರಲ್ಲಿ ನೊಳಂಬ ಲಿಂಗಾಯತ, ಕೋಡ್ 976 ರಲ್ಲಿ ನೊಣಬ ಲಿಂಗಾಯತ ಎಂದು ಇದೆ. ಕೋಡ್ 1010 ರಲ್ಲಿ ಪಂಚಮಸಾಲಿ ಲಿಂಗಾಯತ ಎಂದು, 1317 ರಲ್ಲಿ ವೀರಶೈವ ಪಂಚಮಸಾಲಿ ಅಂತ ಇದೆ. 571 ರಲ್ಲಿ ಕಮ್ಮಾರ ಲಿಂಗಾಯತ, 758 ರಲ್ಲಿ ಲಿಂಗಾಯತ ಕಮ್ಮಾರ ಎಂದು ಇದೆ. ಹೀಗೆ ಹಲವು ಗೊಂದಲಗಳಿವೆ’ ಎಂದು ಹೇಳಿದರು.
‘ಜವಾಬ್ದಾರಿ ಸ್ಥಾನದಲ್ಲಿರುವವರು ಬೇಜವಾಬ್ದಾರಿಯಿಂದ ವರ್ತಿಸಬಾರದು. ಆಯೋಗದ ಅಧ್ಯಕ್ಷರು ಈ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಕೆಲವು ಸಚಿವರ ಬಳಿ ಮಾತನಾಡಿದ್ದೇನೆ. ಸೆ. 16 ರಂದು ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ’ ಎಂದು ಹೇಳಿದರು.
ಶಾಸಕ ಡಿ.ಜಿ. ಶಾಂತನಗೌಡ, ಸಾಧುವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ನ್ಯಾಮತಿಯ ಶಿವಪ್ಪ, ಮಾಜಿ ಶಾಸಕ ಡಿ.ಬಿ. ಗಂಗಪ್ಪ, ಮುಖಂಡರಾದ ಗುರುಮೂರ್ತಿ, ಕೆಂಗಲಹಳ್ಳಿ ಷಣ್ಮುಖಪ್ಪ, ಬಿ.ಜಿ. ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.