ADVERTISEMENT

ಶೇ 10 ಮೀಸಲಾತಿ ಪರ ಖರ್ಗೆ ಹೇಳಿಕೆ ಸರಿಯಲ್ಲ: ದಿನೇಶ್‌ ಅಮೀನ್‌ ಮಟ್ಟು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 4:43 IST
Last Updated 14 ನವೆಂಬರ್ 2022, 4:43 IST
ದಿನೇಶ್‌ ಅಮಿನ್‌ ಮಟ್ಟು
ದಿನೇಶ್‌ ಅಮಿನ್‌ ಮಟ್ಟು   

ದಾವಣಗೆರೆ: ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಾಗ ಅದನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದರು. ಕಾಂಗ್ರೆಸ್‌ ಪಕ್ಷವು ದಲಿತರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಆ ಸಮುದಾಯದ ವಿರುದ್ಧವೇ ಹೇಳಿಕೆ ಕೊಡುವಂತೆ ಮಾಡುವುದು ಅಕ್ಷಮ್ಯ ಎಂದು ಚಿಂತಕ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ‘ಬಿ. ಬಸವಲಿಂಗಪ್ಪ: ನೂರರ ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖರ್ಗೆ ಬಹಳ ಕಾಲದಿಂದ ನನಗೆ ಗೊತ್ತಿದೆ. ಶೇ 10 ಮೀಸಲಾತಿ ಬಗ್ಗೆ ಇವತ್ತು ಹೋಗಿ ವೈಯಕ್ತಿಕವಾಗಿ ಅವರಲ್ಲಿ ಅಭಿಪ್ರಾಯ ಕೇಳಿದರೆ ಅವರು ಖಂಡಿತ ವಿರೋಧಿಸುತ್ತಾರೆ. ಆದರೆ, ಸ್ವಾಗತಿಸಿ ಹೇಳಿಕೆ ನೀಡುವ ಅನಿವಾರ್ಯತೆ ಯಾಕೆ ಸೃಷ್ಟಿಯಾಯಿತು ಎಂದು ಪ್ರಶ್ನಿಸಿದರು.

ADVERTISEMENT

ಶೇ 10 ಮೀಸಲಾತಿ ಬರುವ ಈ ಸಮಯದಲ್ಲಿ ಬಸವಲಿಂಗಪ್ಪ ಇದ್ದಿದ್ದರೆ ಅವರು ರಾಜ್ಯದ ಬಂದ್‌ಗೆ ಕರೆ ಕೊಡುತ್ತಿದ್ದರು. ಯಾಕೆಂದರೆ, ಇದು ಹೀಗೆ ಮುಂದುವರಿದರೆ ಜಾತಿ ಆಧಾರಿತ ಮೀಸಲಾತಿ ರದ್ದಾಗುತ್ತದೆ. ಸಂವಿಧಾನದ ರಕ್ಷಣೆ ಇಲ್ಲದೇ ಹೋದರೆ ನಾವು ಬೀದಿಗೆ ಬೀಳುತ್ತೇವೆ. ಈ ಮೀಸಲಾತಿ ನಮ್ಮ ಶವದ ಪೆಟ್ಟಿಗೆಗೆ ಹೊಡೆದ ಮೊದಲ ಮೊಳೆ ಎಂದು ಹೇಳಿದರು.

398 ಪುಟಗಳ ಈ ತೀರ್ಪನ್ನು ಎಲ್ಲರೂ ಓದಬೇಕು. ಜಾತಿ ಆಧಾರಿತ ಮೀಸಲಾತಿ ರದ್ದು ಮಾಡಲು ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿಯವರೇ ಹೇಳಿದ್ದಾರೆ. ಐವರು ನ್ಯಾಯಮೂರ್ತಿಗಳಲ್ಲಿ ಯು.ಟಿ. ಲಲಿತಾ ಮತ್ತು ರವೀಂದ್ರಭಟ್‌ ಅವರು ಕೂಡ ಶೇ 10 ಮೀಸಲಾತಿ ಬೇಡ ಎಂದಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ ಒಳಗೊಂಡಿಲ್ಲ ಎಂಬುದಷ್ಟೇ ಅವರ ಆಕ್ಷೇಪವಾಗಿದೆ ಎಂದರು.

ಜಾರಕಿಹೊಳಿ ಹೇಳಿಕೆ ಸತ್ಯ: ಹಿಂದೂ ಶಬ್ದಕ್ಕೆ ಪರ್ಶಿಯನ್‌ ಭಾಷೆಯಲ್ಲಿ ಹೀನ ಅರ್ಥವಿದೆ ಎಂದು ಸತೀಶ್‌ ಜಾರಕಿಹೊಳಿ ಅವರು ಹೇಳಿರುವುದು ಸುಳ್ಳು ಎಂದು ಯಾರೂ ಹೇಳುತ್ತಿಲ್ಲ. ಆದರೆ ಅದನ್ನು ಹೇಳಬಾರದಿತ್ತು ಎಂಬುದು ಆಕ್ಷೇಪ ಎತ್ತಿದವರ ಅಭಿಪ್ರಾಯ. ಅಂದರೆ ಸತ್ಯವನ್ನು ಹೇಳಬಾರದು ಎನ್ನುವುದು ಅವರ ವಾದ ಎಂದು ಮಟ್ಟು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.