ADVERTISEMENT

ಕೊಂಡಜ್ಜಿ ದರೋಡೆ ಪ್ರಕರಣ: ಕೆಲವೇ ಗಂಟೆಯಲ್ಲಿ ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:50 IST
Last Updated 4 ನವೆಂಬರ್ 2025, 7:50 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹರಿಹರ: ಬೈಕ್ ತಡೆದು ಹಲ್ಲೆ ನಡೆಸಿ ದರೋಡೆ ಮಾಡಿದ್ದ 6 ಜನ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ತಾಲ್ಲೂಕಿನ ಕೊಂಡಜ್ಜಿಯ ಎ.ಕೆ.ಕಾಲೊನಿ ನಿವಾಸಿಗಳಾದ ವಿಷ್ಣು, ಹನುಮಂತ, ಅಮಿತ್, ಅಜಯ್, ದಾವಣಗೆರೆಯ ಅಜಿತ್ ಮತ್ತು ಕಿರಣ್ ಬಂಧಿತ ಆರೋಪಿಗಳು.

ಘಟನೆ ವಿವರ: ಹರಿಹರದ ವಿಜಯನಗರ ಬಡಾವಣೆ ನಿವಾಸಿ ಪ್ರಶಾಂತ್ ಎಂಬುವರು ಕೊಂಡಜ್ಜಿ ಗ್ರಾಮದ ಸಮೀಪ ನಾಗಪುರ ಕ್ರಾಸ್ ಬಳಿ ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಕಾಲೇಜಿಗೆ ರಜೆ ಇದೆ ಎಂದು ಪ್ರಶಾಂತ್ ಅವರ ಪುತ್ರ ಬಿಸಿಎ ವಿದ್ಯಾರ್ಥಿ ಆದಿತ್ಯ (19) ಭಾನುವಾರ ಬಾರ್ ನಿರ್ವಹಿಸಿ, ರಾತ್ರಿ 10ಕ್ಕೆ ಬಾರ್ ಬಂದ್ ಮಾಡಿ ₹ 67,000 ಮೊತ್ತವನ್ನು ತಮ್ಮ ಬೈಕ್‌ನ ಡಿಕ್ಕಿಯಲ್ಲಿಟ್ಟುಕೊಂಡು ಹರಿಹರದ ಕಡೆ ಬರುತ್ತಿದ್ದರು. ಪೊಲೀಸ್ ಪಬ್ಲಿಕ್ ಸ್ಕೂಲ್ ಬಳಿ ಬಂದಾಗ ತನ್ನನ್ನು ಬೈಕುಗಳಲ್ಲಿ ಕೆಲವರು ಬೆನ್ನಟ್ಟಿರುವುದು ಅರಿವಿಗೆ ಬಂದಿದೆ.

ಬೈಕ್ ಓಡಿಸುತ್ತಲೆ ಬಾರ್ ಎದುರಿನ ಪೆಟ್ರೋಲ್ ಪಂಪ್‌ನ ಪಾಪಣ್ಣ ಮತ್ತು ಕೊಂಡಜ್ಜಿಯ ಸತೀಶ್ ಎಂಬುವರಿಗೆ ಈ ವಿಷಯ ತಿಳಿಸಿದ್ದಾರೆ. ಬೈಕ್ ವೇಗವಾಗಿ ಓಡಿಸಿದ್ದಾರೆ. ಆರೋಪಿಗಳು ಆದಿತ್ಯನ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ಹೇಗೋ ಬ್ಯಾಲೆನ್ಸ್ ಮಾಡಿಕೊಂಡು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಬಳಿ ಬಂದಾಗ ಆರೋಪಿಗಳು ಬೈಕ್ ಅಡ್ಡಗಟ್ಟಿ, ಒಬ್ಬ ಕಬ್ಬಿಣದ ರಾಡಿನಿಂದ ಆದಿತ್ಯನ ತಲೆಗೆ, ಮತ್ತೊಬ್ಬ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಬೈಕ್‌ನಿಂದ ಕೆಗೆ ಬಿದ್ದಾಗ ಬೈಕ್  ಡಿಕ್ಕಿಯಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಆಗ ಸ್ಥಳಕ್ಕೆ ಕಾರಿನಲ್ಲಿ ಬಂದ ಪಾಪಣ್ಣ ಮತ್ತು ಸತೀಶ್ ಅವರು ಆದಿತ್ಯನನ್ನು ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮಾಹಿತಿಯನ್ನು ಆಧರಿಸಿ ಕೆಲವೆ ಗಂಟೆಗಳಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಿ ದರೋಡೆ ಮಾಡಿದ ಹಣವನ್ನು ಜಪ್ತಿ ಮಾಡಿದ್ದಾರೆ.

ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಯುವರಾಜ್ ಕಂಬಳಿ ಮತ್ತು ಸಿಬ್ಬಂದಿ ನಡೆಸಿದ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.