ಕೆಎಸ್‌ಆರ್‌ಟಿಸಿಯ ಸ್ಮಾರ್ಟ್ ಇಟಿಎಂ (ಸಂಗ್ರಹ ಚಿತ್ರ)
ದಾವಣಗೆರೆ: ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ರೂಪದಲ್ಲಿ ಟಿಕೆಟ್ ದರ ಪಾವತಿಸುವ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸ್ಮಾರ್ಟ್ ಎಲೆಕ್ಟ್ರಿಕ್ ಟಿಕೆಟ್ ಮಷಿನ್‌ಗಳಿಗೆ (ಇಟಿಎಂ) ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ.
ಯುಪಿಐ ಮೂಲಕ ಟಿಕೆಟ್ ದರ ಪಾವತಿಸುವ ಪ್ರಯಾಣಿಕರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೂ ಒಮ್ಮೊಮ್ಮೆ ಟಿಕೆಟ್ ಮುದ್ರಿತವಾಗುತ್ತಿಲ್ಲ. ಪಾವತಿ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ತಾಂತ್ರಿಕ ದೋಷವು ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವಿನ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇದರಿಂದ ಅರಣ್ಯ, ಗುಡ್ಡಗಾಡು, ಗ್ರಾಮೀಣ ಪ್ರದೇಶದಲ್ಲಿ ಯುಪಿಐ ಮೂಲಕ ಟಿಕೆಟ್ ವಿತರಣೆಗೆ ನಿರ್ವಾಹಕರು ಹಿಂದೇಟು ಹಾಕುತ್ತಿದ್ದಾರೆ.
ಯುಪಿಐ ಆಧಾರಿತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ದರ ಪಾವತಿಸುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಅನುಷ್ಠಾನಗೊಳಿಸಿದೆ. ಕೆಎಸ್‌ಆರ್‌ಟಿಸಿಯು ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಯುಪಿಐ ವ್ಯವಸ್ಥೆ ಪೂರ್ಣಗೊಂಡ ಬಳಿಕ ಟಿಕೆಟ್ ಮುದ್ರಣವಾಗುತ್ತದೆ. ನೆಟ್‌ವರ್ಕ್, ಸರ್ವರ್ ಸಮಸ್ಯೆ ಹಾಗೂ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುನ್ನ ನಿಗದಿತ ಸಮಯ ಮುಗಿದ (ಟೈಮ್ ಔಟ್) ಕಾರಣಕ್ಕೆ ಟಿಕೆಟ್ ಲಭ್ಯವಾಗದು. ಇದು ಪ್ರಯಾಣಿಕರು ಮತ್ತು ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಚಲಿಸುವ ಬಸ್‌ನಲ್ಲಿ ಯುಪಿಐ ಪಾವತಿಗೆ ತಾಂತ್ರಿಕ ದೋಷಗಳು ಎದುರಾಗುತ್ತಿವೆ. ನೆಟ್‌ವರ್ಕ್ ತೊಂದರೆ ಇರುವ ಪ್ರದೇಶದಲ್ಲಿ ಹಣ ಪಾವತಿ ವ್ಯವಸ್ಥೆ ವಿಫಲಗೊಳ್ಳುತ್ತಿದೆ. ನೆಟ್‌ವರ್ಕ್ ಖಚಿತಪಡಿಸಿಕೊಂಡು ಯುಪಿಐ ಟಿಕೆಟ್ ವಿತರಣೆ ಮಾಡುವಂತೆ ಕೆಎಸ್‌ಆರ್‌ಟಿಸಿಯು ನಿರ್ವಾಹಕರಿಗೆ ಸೂಚನೆ ನೀಡಿದೆ. ನೆಟ್‌ವರ್ಕ್ ಸರಿಯಾಗಿ ಇಲ್ಲದ ಪ್ರದೇಶದಲ್ಲಿ ಯುಪಿಐ ಆಧಾರಿತ ಟಿಕೆಟ್ ವಿತರಣೆಗೆ ನಿರ್ವಾಹಕರು ಆಸಕ್ತಿ ತೋರುತ್ತಿಲ್ಲ.
‘ಯುಪಿಐ ಪಾವತಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಹಣ ಪಾವತಿ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಪ್ರಯಾಣಿಕರ ಖಾತೆಯಿಂದ ಕಡಿತಗೊಂಡ ಹಣ ನಿಗಮದ ಖಾತೆಗೆ ಜಮಾ ಆಗುವುದಿಲ್ಲ. ಇದು ಪ್ರಯಾಣಿಕರಿಗೆ ಮರಳಲು ಸರಾಸರಿ ಮೂರು ದಿನ ತೆಗೆದುಕೊಳ್ಳುತ್ತದೆ. ಇದನ್ನು ಒಪ್ಪದ ಅನೇಕರು ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಆಗ ಅನಿವಾರ್ಯವಾಗಿ ನಿರ್ವಾಹಕರು ಪ್ರಯಾಣಿಕರ ದರ ತೆರಬೇಕು. ಇಂತಹ ಹಲವು ಪ್ರಕರಣಗಳಲ್ಲಿ ಹಣ ಕಳೆದುಕೊಂಡಿದ್ದೇನೆ’ ಎಂದು ದಾವಣಗೆರೆ ವಿಭಾಗದ ನಿರ್ವಾಹಕರೊಬ್ಬರು ಅಳಲು ತೋಡಿಕೊಂಡರು.
ಯುಪಿಐ ವ್ಯವಸ್ಥೆ ವಿಫಲಗೊಂಡರೆ ಪ್ರಯಾಣಿಕರು ನಗದು ನೀಡಿ ಟಿಕೆಟ್ ಪಡೆಯಬೇಕು. ‘ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡರೂ ಟಿಕೆಟ್‌ಗೆ ಮತ್ತೇಕೆ ಹಣ ನೀಡಬೇಕು’ ಎಂಬುದು ಪ್ರಯಾಣಿಕರ ಪ್ರಶ್ನೆ. ‘ವಿಫಲಗೊಂಡ ಪಾವತಿ ವ್ಯವಸ್ಥೆಯಲ್ಲಿ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಸ್ವಯಂಚಾಲಿತವಾಗಿ ಜಮಾ ಆಗುತ್ತದೆ’ ಎಂಬ ನಿರ್ವಾಹಕರ ಭರವಸೆಯನ್ನು ಯಾರೊಬ್ಬರೂ ಒಪ್ಪುತ್ತಿಲ್ಲ.
ನಗರ ಪ್ರದೇಶ ಹಾಗೂ ನೆಟ್‌ವರ್ಕ್ ಪೂರ್ಣವಾಗಿ ಲಭ್ಯವಿರುವ ಸ್ಥಳದಲ್ಲಿ ಮಾತ್ರ ಯುಪಿಐ ಆಧಾರಿತ ಟಿಕೆಟ್ ವಿತರಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ನಗದು ನೀಡುವಂತೆ ನಿರ್ವಾಹಕರು ಕೇಳಿಕೊಳ್ಳುತ್ತಿದ್ದಾರೆ. ಇದಕ್ಕೂ ಕೆಲ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
‘ಜೇಬಿನಲ್ಲಿ ಹಣ ಇಲ್ಲದಿದ್ದರೂ ಫೋನ್ ಕೈಯಲ್ಲಿ ಹಿಡಿದು ಬಸ್ ಏರಿದ್ದೇನೆ. ಯುಪಿಐ ಪಾವತಿ ವಿಫಲಗೊಂಡ ನೆಪವೊಡ್ಡಿ ನಿರ್ವಾಹಕರು ಮತ್ತೆ ಟಿಕೆಟ್ ದರ ಕೇಳುತ್ತಿದ್ದಾರೆ. ಬ್ಯಾಂಕ್ ಖಾತೆಯಿಂದ ಕಡಿತಗೊಂಡ ಹಣ ಯಾವಾಗ ಮರಳಲಿದೆ ಎಂಬ ಖಚಿತತೆ ಇಲ್ಲ. ಟಿಕೆಟ್ ದರ ನೀಡಲು ಜೇಬಿನಲ್ಲಿ ಹಣವಿಲ್ಲ. ಯುಪಿಐ ಸೇವೆ ಇಲ್ಲ ಎಂಬ ಸಂದೇಶವನ್ನಾದರೂ ಬಸ್‌ನಲ್ಲಿ ಪ್ರದರ್ಶಿಸಿ’ ಎಂದು ಚನ್ನಗಿರಿಗೆ ಪ್ರಯಾಣ ಮಾಡುತ್ತಿದ್ದ ದಾವಣಗೆರೆಯ ನಿಟುವಳ್ಳಿಯ ಮಧು ಅಸಮಾಧಾನ ಹೊರಹಾಕಿದರು.
ಯುಪಿಐ ಪಾವತಿ ವ್ಯವಸ್ಥೆ ವಿಫಲಗೊಂಡು ಪ್ರಯಾಣಿಕರ ಬ್ಯಾಂಕ್ ಖಾತೆಯಿಂದ ಕಡಿತವಾದ ಹಣ ವಾರದೊಳಗೆ ಮರಳಿ ಜಮಾ ಆಗುತ್ತದೆ. ಪ್ರಯಾಣಿಕರಿಗೆ ಈ ಮಾಹಿತಿ ನೀಡಿ ಮನವೊಲಿಸಿದ್ದೇವೆ.–ಕಿರಣ್‌ಕುಮಾರ್ ಬಸಾಪುರ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.