
ದಾವಣಗೆರೆ: ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸುವಂತೆ ಎಲ್ಲ ರಾಜಕೀಯ ಪಕ್ಷಗಳ ಎದುರು ಹಕ್ಕು ಮಂಡಿಸೋಣ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ಹೇಳಿದರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ರಾಜಕೀಯ ಚಿಂತನ - ಮಂಥನ ಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಫೆಬ್ರುವರಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಕಳೆದ ಅವಧಿಯಲ್ಲಿ ಸಮುದಾಯದ 113 ಜಿಲ್ಲಾ ಪಂಚಾಯಿತಿ ಸದಸ್ಯರು ಆಯ್ಕೆಯಾಗಿದ್ದರು. 350 ಕ್ಕೂ ಅಧಿಕ ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದರು. ಇದಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ಪಡೆದುಕೊಳ್ಳಬೇಕಿದೆ’ ಎಂದು ಹೇಳಿದರು.
‘ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ನಲ್ಲಿ ಪ್ರಬಲ ಸಮುದಾಯಗಳು ಸೇರ್ಪಡೆಯಾಗಿವೆ. ಈ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡುವುದು ಕಷ್ಟ. ರಾಜಕೀಯ ಪಕ್ಷಗಳ ಟಿಕೆಟ್ ಪಡೆದುಕೊಂಡರೆ ಅರ್ಧ ಗೆಲುವು ಸಿಕ್ಕಂತೆ. ಇತ್ತ ಗಮನ ಹರಿಸುವ ಅಗತ್ಯವಿದ್ದು, ಆಸಕ್ತರ ಪಟ್ಟಿಯನ್ನು ಸಿದ್ಧಪಡಿಸಿ ಎಲ್ಲ ರಾಜಕೀಯ ಪಕ್ಷಗಳ ರಾಜ್ಯ ಘಟಕದ ಅಧ್ಯಕ್ಷರ ಮುಂದೆ ಇಡೋಣ’ ಎಂದರು.
‘ಕುರುಬ ಸಮುದಾಯಕ್ಕೆ ಉಪಪಂಗಡಗಳಿಲ್ಲ. ರಾಜ್ಯದಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಅತಿ ದೊಡ್ಡ ಸಮುದಾಯವಾಗಿ ಹೊರಹೊಮ್ಮುವ ವಿಶ್ವಾಸವಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ 2 ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದ್ದರೂ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಸಮುದಾಯದ 25 ಜನರು ಮಾತ್ರ ಸಚಿವರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಳಗಾವಿ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಈಚೆಗೆ ನಡೆದ ಚುನಾವಣೆಯಲ್ಲಿ ಒಬ್ಬರು ಕೂಡ ನಿರ್ದೇಶಕರಾಗಲು ಸಾಧ್ಯವಾಗಿಲ್ಲ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿದ್ದರೂ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ’ ಎಂದರು.
‘ರಾಜ್ಯದಲ್ಲಿ ಸಮುದಾಯದ 14 ಶಾಸಕರಿದ್ದರೂ ಕುರಿ ಸಂರಕ್ಷಣಾ ಕಾಯ್ದೆಯ ಪರವಾಗಿ ಮಾತನಾಡಿದ್ದು ಒಬ್ಬರು ಮಾತ್ರ. ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಸೇರಿದಂತೆ ಯಾರೊಬ್ಬರೂ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಕುರುಬ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. 2028ಕ್ಕೆ ಮುಖ್ಯಮಂತ್ರಿ ಗಾದಿ ಬದಲಾಗಲಿದೆ. ಸಿದ್ದರಾಮಯ್ಯ ಅವರಿಗೆ ಪರ್ಯಾಯ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎರಡನೇ ಹಂತದ ನಾಯಕರನ್ನು ಬೆಳೆಸುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್ ಮುಖಂಡ ನಿಕೇತರಾಜ್ ಮೌರ್ಯ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಬೇಕು ಹಾಗೂ ಎಚ್.ಎಂ. ರೇವಣ್ಣ ಅವರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಉಪಾಧ್ಯಕ್ಷ ಡಿ.ಡಿ. ಮಾಳಗಿ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ವೀರಣ್ಣ, ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಬಿಜೆಪಿ ಮುಖಂಡರಾದ ಕೋಳೆನಹಳ್ಳಿ ಬಿ.ಎಂ.ಸತೀಶ್, ಶರಣಪ್ಪ ಹಾಜರಿದ್ದರು.
‘ಕುಟುಂಬಗಳ ಹಿಡತದಲ್ಲಿ ಪಕ್ಷಗಳು’
ರಾಜ್ಯ ಪ್ರಮುಖ ರಾಜಕೀಯ ಪಕ್ಷಗಳು ಕೆಲವೇ ಕುಟುಂಬಗಳ ಹಿಡಿತದಲ್ಲಿವೆ. ಸಮುದಾಯ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಲು ಎಲ್ಲ ಪಕ್ಷಗಳಲ್ಲಿ ಹಂಚಿಹೋಗಬೇಕು. ಸೈದ್ದಾಂತಿಕ ನೆಲೆಗಟ್ಟಿನ ಅನುಗುಣವಾಗಿ ಭಿನ್ನ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬೇಕು’ ಎಂದು ಯಲ್ಲಪ್ಪ ಸಲಹೆ ನೀಡಿದರು. ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಸಮುದಾಯಕ್ಕೆ ಅನುಕೂಲಗಳಷ್ಟೇ ಅಲ್ಲ ಅನಾನುಕೂಲಗಳೂ ಆಗಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮರ್ಥ ನಾಯಕತ್ವ ಕಳೆದುಕೊಂಡಿದ್ದೇವೆ’ ಎಂದು ಬೇಸರ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.