ADVERTISEMENT

ಕೆಂಗಾಪುರದ ಕೆರೆಗೆ ಜೀವಕಳೆ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಕಾಯಕಲ್ಪ

ಎನ್.ವಿ.ರಮೇಶ್
Published 3 ಫೆಬ್ರುವರಿ 2025, 7:01 IST
Last Updated 3 ಫೆಬ್ರುವರಿ 2025, 7:01 IST
ಬಸವಾಪಟ್ಟಣ ಸಮೀಪದ ಕೆಂಗಾಪುರದಲ್ಲಿ ಸಂಪೂರ್ಣ ಮುಚ್ಚಿಹೋಗಿದ್ದ ಕೆರೆ
ಬಸವಾಪಟ್ಟಣ ಸಮೀಪದ ಕೆಂಗಾಪುರದಲ್ಲಿ ಸಂಪೂರ್ಣ ಮುಚ್ಚಿಹೋಗಿದ್ದ ಕೆರೆ   

ಬಸವಾಪಟ್ಟಣ: ಸಮೀಪದ ಕೆಂಗಾಪುರದಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಸಂಪೂರ್ಣ ಮುಚ್ಚಿಹೋಗಿದ್ದ, ನೂರಾರು ವರ್ಷಗಳ ಹಿಂದಿನ ಕೆರೆಯಲ್ಲಿ ಈಗ ಜೀವ ಸಂಚಾರವಾಗಿದೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಕೆರೆಗೆ ಪುನರ್ಜನ್ಮ ನೀಡಿದೆ.

‘ಗ್ರಾಮಸ್ಥರು ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಕೆರೆ ಅಂದಾಜು 50 ವರ್ಷಗಳಿಂದ ಬಳಕೆಯಾಗದೇ ಮುಚ್ಚಿಹೋಗಿ, ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸಂಪರ್ಕಿಸಿ ಕೆರೆಯ ಪುನರ್‌ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು, ಕೆರೆಗೆ ಮತ್ತೆ ಅಸ್ತಿತ್ವ ತಂದುಕೊಟ್ಟಿದ್ದಾರೆ’ ಎಂದು ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಗಣೇಶನಾಯ್ಕ ತಿಳಿಸಿದರು.

‘1.27 ಎಕರೆ ವಿಸ್ತೀರ್ಣದ ಈ ಕೆರೆಯು ಮುಚ್ಚಿಹೋಗಿದ್ದ ಕಾರಣ, ಅದರ ಕೆಲವು ಭಾಗ ಒತ್ತುವರಿಯಾಗುತ್ತಿತ್ತು. ಇದೀಗ ಕೆರೆ ಪುನರ್‌ ನಿರ್ಮಾಣಗೊಂಡಿರುವುದರಿಂದ, ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗಲಿದ್ದು, ದನಕರುಗಳಿಗೆ ಕುಡಿಯಲು ಹಾಗೂ ಮೀನುಗಾರಿಕೆಗೆ ಅನುಕೂಲವಾಗಲಿದೆ. ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದಲ್ಲಿ ಸುಲಭವಾಗಿ ನೀರು ಸಿಗುವಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ನಮ್ಮೂರು ನಮ್ಮ ಕೆರೆ ಯೋಜನೆ’ಯಲ್ಲಿ ಕೆಂಗಾಪುರದ ಕೆರೆಯನ್ನು ಸಂಸ್ಥೆಯಿಂದ ₹2.55 ಲಕ್ಷ ವೆಚ್ಚದಲ್ಲಿ ಪುನರ್‌ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ 800 ಕೆರೆಗಳಿಗೆ ಹೊಸ ರೂಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ವಾರ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಗುವುದು’ ಎಂದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್‌ ಪೂಜಾರಿ ತಿಳಿಸಿದರು.

ಕೆರೆಯ ಹೂಳು ಮಣ್ಣು ಹೊಲ–ಗದ್ದೆ ತೋಟಗಳಿಗೆ ಉತ್ಕೃಷ್ಟವಾದ ಗೊಬ್ಬರವಾಗಿದ್ದು ಜೆ.ಸಿ.ಬಿ. ಯಂತ್ರದ ಮೂಲಕ ಹೊರತೆಗೆದು ರೈತರಿಗೆ ನೀಡಲಾಗಿದೆ
ಹನುಮಂತಪ್ಪ ಯೋಜನೆಯ ಕೃಷಿ ಮೇಲ್ವಿಚಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.