ADVERTISEMENT

ಸಮಾಜದಲ್ಲಿ ಲಿಂಗಬೇಧ ತೊಲಗಲಿ

ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:41 IST
Last Updated 8 ಜನವರಿ 2021, 6:41 IST
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಂಜುನಾಥ ಕುರ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಂಜುನಾಥ ಕುರ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.   

ದಾವಣಗೆರೆ:ಸಮಾಜದಲ್ಲಿ ಸ್ತ್ರೀ ಕೂಡ ಪ್ರಥಮ ಪ್ರಜೆ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು. ಲಿಂಗಬೇಧ ತೊಡೆದುಹಾಕಬೇಕು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಾಶ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲೇ ಲಿಂಗಭೇದವನ್ನು ಕಿತ್ತುಹಾಕಿ ಮಹಿಳೆಯರಿಗೆ ಸಮಾನತೆ ನೀಡಿದವರು ಬಸವಣ್ಣ. ಸ್ತ್ರೀ ಸಮಾನತೆಗಾಗಿಯೇ ಮನೆ ಬಿಟ್ಟು ಬಂದ ಮಹಾತ್ಮರು. ‘ಮಹಿಳೆಗೆ ಇರದ ದೀಕ್ಷೆ ನನಗೂ ಬೇಡ’ ಎಂದು ಸಂಪ್ರದಾಯ ಧಿಕ್ಕರಿಸಿ ಸಮಾನತೆಯ ವಿಶ್ವದ ಮೊದಲ ಸಂಸತ್‌ ಅನುಭವ ಮಂಟಪ ಕಟ್ಟಿದವರು ಎಂದು ಹೇಳಿದರು.

ADVERTISEMENT

ಮಹಿಳೆಯರಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಇದೆ. ಅವರಿಗೆ ಪ್ರೋತ್ಸಾಹ ಸಿಗಬೇಕು ಎಂದ ಅವರು, ‘ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಅವರು ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಆದರೆ ಮಹಿಳಾ ಸಾಧಕರ ಸಂಖ್ಯೆ ಕಡಿಮೆ ಇದೆ. ಆದು ದ್ವಿಗುಣಗೊಂಡಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ.ಮಹಿಳೆಯರು ಕೀಳರಿಮೆಯಿಂದ ಹೊರಬಂದು ಸಾಧನೆ ಮಾಡಲು ಮುಂದಾಗಬೇಕು. ಮಹಿಳೆಯರಿಗೆ 100ಕ್ಕೆ 100 ಮೀಸಲಾತಿ ಸಿಗಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಂಜುನಾಥ ಕುರ್ಕಿ, ‘ಪುರುಷರಿಗೆ ಮಹಿಳೆಯರ ಬಗೆಗಿನ ಮನೋಭಾವ ಬದಲಾಗಬೇಕಿದೆ. ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಿದ ದೇಶ ಇರುವುದಾದರೆ ಅದು ಭಾರತ ಮಾತ್ರ. ಗಾಂಧೀಜಿ ಕೂಡ ರಾಷ್ಟ್ರದ ಶಕ್ತಿ ಮಹಿಳೆ ಎಂದಿದ್ದರು. ಒಂದು ರಾಷ್ಟ್ರದ ಪ್ರಗತಿಯ ಮಟ್ಟ ಆ ದೇಶದಲ್ಲಿ ಮಹಿಳೆಯರಿಗೆ ಇರುವ ಸ್ಥಾನಮಾನದ ಮಾನದಂಡ ಅಧರಿಸಿದೆ ಎಂದು ನೆಹರೂ ಹೇಳಿದ್ದರು. ಇಂದು ಮಹಿಳೆ ವಿಶ್ವ ಬೆರಗಾಗುವಂತೆ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ’ ಎಂದರು.

ಜಾಗತಿಕ ಮಾರುಕಟ್ಟೆ ಸಂಸ್ಕೃತಿ
ಯಲ್ಲಿ ಮಹಿಳೆಯನ್ನು ಒಂದು ಮಾರಾಟದ ವಸ್ತುವಾಗಿ, ಅವಹೇಳನಕಾರಿ ಬಿಂಬಿಸುತ್ತಿರುವುದು ಅಕ್ಷಮ್ಯ. ಪುರುಷರನ್ನು ಆತನ ಮಾಡಿದ ಹಣದಿಂದ ಗುರುತಿಸಿದರೆ, ಮಹಿಳೆಯನ್ನು ಆಕೆಯ ಚಾರಿತ್ರ್ಯದಿಂದ ಗುರುತಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಮಾತನಾಡಿದರು.

ಉಪನ್ಯಾಸಕಿ ಡಾ. ಅನಿತಾ ದೊಡ್ಡಗೌಡರ್‌ ‘ಉದ್ಯೋಗಸ್ಥ ಮಹಿಳೆಯರ ಮುಂದಿರುವ ಸವಾಲುಗಳು’ ವಿಷಯ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.

ದಾವಣಗೆರೆ, ಜಗಳೂರು, ಚನ್ನಗಿರಿ, ಹರಿಹರ, ಶಿವಮೊಗ್ಗ,ಸಾಗರ ಸೇರಿ ವಿವಿಧೆಡೆಯ ಮಹಿಳಾ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.