ADVERTISEMENT

ಚೌಕಟ್ಟಿನಿಂದ ಹೊರ ಬಂದರೆ ಯಶಸ್ಸು

ರ‍್ಯಾಪಿಡೋ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀವತ್ಸ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:42 IST
Last Updated 28 ಸೆಪ್ಟೆಂಬರ್ 2025, 5:42 IST

ದಾವಣಗೆರೆ: ‘ಸೀಮಿತ ಚೌಕಟ್ಟಿನಿಂದ ಹೊರ ಬಂದು ಸವಾಲುಗಳನ್ನು ಸ್ವೀಕರಿಸಿದಾಗ ಯಶಸ್ಸು ದೊರೆಯುತ್ತದೆ’ ಎಂದು ಬೆಂಗಳೂರಿನ ರ‌್ಯಾಪಿಡೋ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಶ್ರೀವತ್ಸ ಹೇಳಿದರು. 

ಇಲ್ಲಿನ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 43ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

‘ಹೊಸ ಸಾಧ್ಯತೆಗಳನ್ನು ಕಂಡುಕೊಂಡು ಅದಕ್ಕೆ ಪೂರಕವಾದ ಕೌಶಲಗಳನ್ನು ಕಲಿಯಬೇಕು. ಭಯಪಡುವ ಕಾರಣವಿಲ್ಲ. ಆದರೆ, ಎಲ್ಲವೂ ಗೊತ್ತು ಎಂಬ ಅಹಂ ಒಳ್ಳೆಯದಲ್ಲ’ ಎಂದು ಸಲಹೆ ನೀಡಿದರು. 

ADVERTISEMENT

‘ನೀವು ಮೆಕ್ಯಾನಿಕಲ್ ಪದವೀಧರರಾದರೆ ಒಂದಿಷ್ಟು ಕೋಡಿಂಗ್ ಹಾಗೂ ಎಐ ಬಗ್ಗೆ ತಿಳಿದುಕೊಳ್ಳಿ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರೆ ಅದರ ಜತೆಗೆ ಮನಃಶಾಸ್ತ್ರದ ಬಗ್ಗೆಯೂ ಒಂದಿಷ್ಟು ಜ್ಞಾನ ಬೆಳೆಸಿಕೊಳ್ಳಿ. ಹೊಸ ಅಲೆಯನ್ನು ತಡೆಯುವುದು ಅಸಾಧ್ಯ. ಆದರೆ, ಅದನ್ನು ಎದುರಿಸಿ ನಿಲ್ಲುವ ತಾಕತ್ತು ಬೆಳೆಸಿಕೊಳ್ಳಬೇಕು’ ಎಂದರು.  

‘ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳಬೇಕು. ಮನೋಧರ್ಮದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಕುತೂಹಲದ ಜತೆಗೆ ಕಲಿಕೆಯನ್ನು ಮುಂದುವರಿಸಬೇಕು. ನಿಮ್ಮದೇ ಆದ ಛಾಪು ಮೂಡಿಸಬೇಕು. ತಂತ್ರಜ್ಞಾನ ಬದಲಾದಂತೆ ಹೊಸ ಸವಾಲುಗಳು ಎದುರಾಗುತ್ತವೆ. ಆದರೂ, ಇರುವ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ಸ್ಮಾರ್ಟ್ ಯಂತ್ರಗಳ ಸ್ಪರ್ಧಾ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಎಲ್ಲ ಕ್ಷೇತ್ರಗಳನ್ನು ಆವರಿಸಿದೆ. ಎಐ ನಮ್ಮ ಎಷ್ಟೇ ಕೆಲಸಗಳನ್ನು ಸುಲಭಗೊಳಿಸಿರಬಹುದು. ಆದರೆ, ಮನುಷ್ಯನಿಗಿರುವ ಸೃಜನಶೀಲತೆ ಅದಕ್ಕಿಲ್ಲ. ತಂತ್ರಜ್ಞಾನದಿಂದ ಅಡ್ಡಿ ಆತಂಕಗಳು ಎದುರಾದರೂ, ಅವಕಾಶದ ಬೆಳಕು ಮೂಡದೇ ಇರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

‘ಈ ಹಿಂದೆ ಇಂಟರ್‌ನೆಟ್‌ ಬಂದಾಗ ಉದ್ಯೋಗಗಳನ್ನು ಕಸಿಯುತ್ತದೆ ಎನ್ನುವ ಆತಂಕವಿತ್ತು. ಆದರೆ ಆಗ ಹೊಸ ಕಂಪನಿಗಳು ಹುಟ್ಟಿಕೊಂಡು ನೂತನ ಅವಕಾಶಗಳು ಸೃಷ್ಟಿಯಾದವು. ಸ್ಮಾರ್ಟ್‌ಫೋನ್‌ಗಳು ಬಂದಾಗಲೂ ಅಂಥದೇ ಅನಿಶ್ಚಿತತೆ ಕಾಡಿತ್ತು. ಜತೆ ಜತೆಗೇ ಹೊಸ ಅವಕಾಶಗಳೂ ಗೋಚರಿಸಿದವು’ ಎಂದು ತಿಳಿಸಿದರು. 

ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಎಚ್.ಬಿ. ಅರವಿಂದ, ಪರೀಕ್ಷಾ ವಿಭಾಗದ ಡೀನ್ ಕುಮಾರಪ್ಪ ಭಾಗವಹಿಸಿದ್ದರು. 

ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥೆ ಜಿ.ಎಸ್. ಸುನೀತಾ ಸ್ವಾಗತಿಸಿ, ನಿರ್ಮಲಾ ಹಾಗೂ ಅವಿನಾಶ್ ಅತಿಥಿಗಳನ್ನು ಪರಿಚಯಿಸಿದರು. ಕೆ.ಎಂ. ಪ್ರಕಾಶ್ ಹಾಗೂ ರಾಧಿಕಾ ಪ್ರಿಯಾ ನಿರೂಪಿಸಿದರು. ಅಂಕಿತಾ ಪ್ರಾರ್ಥಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.