ದಾವಣಗೆರೆ: ರಾಜ್ಯದಲ್ಲಿರುವ ಎಲ್ಲರೂ ಲಿಂಗಾಯತರೇ. ವೀರಶೈವರು ಕೂಡ ನಮ್ಮವರೇ. ಅವರಲ್ಲಿ ಬಸವತತ್ವದ ಬಗ್ಗೆ ಅರಿವು ಮೂಡಿದಾಗ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ಸಿಗಲಿದೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವಚನ ಸಾಹಿತ್ಯದಿಂದ ದೂರ ಸರಿದ ಪರಿಣಾಮವಾಗಿ ದಾರಿ ತಪ್ಪಿದ್ದೇವೆ. ವಚನಗಳ ಸಮೀಪಕ್ಕೆ ಬರುತ್ತಿದ್ದಂತೆ ಸರಿಯಾದ ದಾರಿ ಸಿಗಲಿದೆ. ಬಸವತತ್ವವೆಂಬ ರಾಜಮಾರ್ಗದಲ್ಲಿ ಸಾಗಲು ಸಾಧ್ಯವಾಗಲಿದೆ’ ಎಂದು ಪ್ರತಿಪಾದಿಸಿದರು.
‘ಜಾತಿ ಗಣತಿ, ಸಮೀಕ್ಷೆಯಲ್ಲಿ ಎಚ್ಚರ ತಪ್ಪಿದರೆ ಮುಂದಿನ ತಲೆಮಾರು ಶಾಪ ಹಾಕುವುದು ನಿಶ್ಚಿತ. ಲಿಂಗ, ರುದ್ರಾಕ್ಷಿಗಳನ್ನು ವಸ್ತಸಂಗ್ರಹಾಲಯಗಳಲ್ಲಿ ನೋಡಬೇಕಾಗುತ್ತದೆ’ ಎಂದು ನಿಜಗುಣಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
‘ಆರ್ಥಿಕ ಕುಸಿತ, ಆಹಾರಕ್ಕೆ ಬಿಕ್ಕಟ್ಟು ಸೃಷ್ಟಿಯಾಗುವ ದಿನಗಳು ಬರಬಹುದು. ಇಂತಹ ಸಂದರ್ಭದಲ್ಲಿ ಸಮಾಜವನ್ನು ಕಾಪಾಡುವ ಶಕ್ತಿ ಇರುವುದು ಲಿಂಗಾಯತ ಧರ್ಮಕ್ಕೆ ಮಾತ್ರ. ಒಳಪಂಗಡಗಳನ್ನು ಮರೆತು ಧರ್ಮದ ಹೆಸರಿನಲ್ಲಿ ಒಗ್ಗೂಡುವ ಅಗತ್ಯವಿದೆ’ ಎಂದರು.
ಅಥಣಿಯ ಚನ್ನಬಸವ ಸ್ವಾಮೀಜಿ, ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಗಂಗಾಮಾತೆ, ಬಸವಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಪ್ರಭುಮಹಂತ ಸ್ವಾಮೀಜಿ, ಶಾಸಕ ಬಿ.ಪಿ. ಹರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.