ADVERTISEMENT

ಹೊಸ ವರ್ಷದ ಸ್ವಾಗತಕ್ಕೆ ಮದ್ಯದ ಕಿಕ್‌: ಮದ್ಯದ ವ್ಯಾಪಾರ ಮೂರು ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 9:37 IST
Last Updated 2 ಜನವರಿ 2020, 9:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಹೊಸ ವರ್ಷದ ಸ್ವಾಗತದ ಹಿನ್ನೆಲೆಯಲ್ಲಿ ಮಂಗಳವಾರ ಒಂದೇ ದಿವಸ ಜಿಲ್ಲೆಯಲ್ಲಿ ಅಂದಾಜು ದಿನದ ಸರಾಸರಿಗಿಂತ ಮೂರುಪಟ್ಟು ವ್ಯಾಪಾರ ಹೆಚ್ಚಳವಾಗಿದೆ.

ಪ್ರತಿ ದಿನದ ವ್ಯಾಪಾರಕ್ಕಿಂತ ₹3 ಕೋಟಿಯಿಂದ ₹4 ಕೋಟಿ ಕೋಟಿ ಮದ್ಯದ ವಹಿವಾಟು ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ರಿಂದ 15ರಷ್ಟು ವ್ಯಾಪಾರ ಹೆಚ್ಚಾಗಿದೆ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಈಶ್ವರ್‌ಸಿಂಗ್ ಕವಿತಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘2019 ಅನ್ನು ಸ್ವಾಗತಿಸಿದಾಗ 7 ಸಾವಿರ ಪೆಟ್ಟಿಗೆಯಷ್ಟು ಮದ್ಯ ಖರ್ಚಾಗಿತ್ತು. ಈ ಬಾರಿ 8 ಸಾವಿರ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆ. ಜಿಲ್ಲೆಯಲ್ಲಿ 270ಕ್ಕೂ ಹೆಚ್ಚು ಮದ್ಯದಂಗಡಿಗಳುಇವೆ. ಆದರೆ ಹೊಸ ವರ್ಷದ ಆಚರಣೆಗೆ ನಗರ ಪ್ರದೇಶಗಳಲ್ಲಿರುವ 100 ಕೌಂಟರ್‌ಗಳಲ್ಲಿ ಹೆಚ್ಚು ವ್ಯಾಪಾರ ನಡೆದಿದೆ. ಅಲ್ಲದೇ ಬಾರ್ ಅಂಡ್ ರೆಸ್ಟೊರೆಂಟ್‌ಗಳಲ್ಲೂ ಹೆಚ್ಚಿನ ವ್ಯಾಪಾರವಾಗಿದೆ’ ಎಂದು ಹೇಳುತ್ತಾರೆ.

ADVERTISEMENT

ವಿಸ್ಕಿ ಮತ್ತು ಬಿಯರ್‌ಗೆ ಬೇಡಿಕೆ ಜಾಸ್ತಿ ಇದ್ದು, ಮಂಗಳವಾರ ಒಂದೇ ದಿನದಲ್ಲಿ 2 ಸಾವಿರ ಪೆಟ್ಟಿಗೆಗಳಷ್ಟು ಮದ್ಯ, 3 ಸಾವಿರ ಪೆಟ್ಟಿಗೆ ಬಿಯರ್ ಹೆಚ್ಚುವರಿಯಾಗಿ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.

ಶೇ 98ರಷ್ಟು ಗುರಿ ಸಾಧನೆ

ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ತಿಂಗಳಲ್ಲಿ 3,117 ಪೆಟ್ಟಿಗೆ ಹೆಚ್ಚಾಗಿದೆ. 1,965 ಬಿಯರ್ ಕಡಿಮೆಯಾಗಿದೆ. ಮದ್ಯ ಮಾರಾಟಲ್ಲಿ ಈ ವರ್ಷ ಶೇ 98ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ಟಿ. ತಿಳಿಸಿದರು.

‘ಚಳಿ ಇರುವುದರಿಂದ ಬಿಯರ್ ವ್ಯಾಪಾರ ಕಡಿಮೆಯಾಗಿದೆ. ಕಳೆದ ವರ್ಷ ವಾತಾವರಣ ಸೆಖೆ ಹೆಚ್ಚು ಇದ್ದುದರಿಂದ ಬಿಯರ್ ಮಾರಾಟ ಜಾಸ್ತಿ ಇತ್ತು. ಈ ವರ್ಷ ಮೊದಲಿನಿಂದಲೂ ಮಳೆ ಬಂದಿರುವುದರಿಂದ ಬಿಯರ್ ಕುಡಿಯುತ್ತಿಲ್ಲ. ದಾವಣಗೆರೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೇ ಕಡಿಮೆ ಇದೆ’ ಎನ್ನುತ್ತಾರೆ ನಾಗರಾಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.