ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಜಾನುವಾರು ಸಂತತಿ: ಶೇ 10ರಷ್ಟು ಕುಸಿತ!

ಜಿಲ್ಲೆಯಲ್ಲಿ 21ನೇ ಗಣತಿ ಪೂರ್ಣ; ‘ಸಾಟಿ’ಯಿಲ್ಲದ ಎಮ್ಮೆಗಳ ಸಂಖ್ಯೆ ಇಳಿಕೆ, ಕೋಳಿ– ಕುರಿ ಹೆಚ್ಚಳ

ಜಿ.ಬಿ.ನಾಗರಾಜ್
Published 3 ಜೂನ್ 2025, 7:36 IST
Last Updated 3 ಜೂನ್ 2025, 7:36 IST
ಕುರಿ (ಸಂಗ್ರಹ ಚಿತ್ರ)
ಕುರಿ (ಸಂಗ್ರಹ ಚಿತ್ರ)   

ದಾವಣಗೆರೆ: ಪಶುಪಾಲನಾ ಕ್ಷೇತ್ರದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ದತ್ತಾಂಶ ಸಂಗ್ರಹಿಸಲು ನಡೆಸಿದ 21ನೇ ಜಾನುವಾರು ಗಣತಿ ಪೂರ್ಣಗೊಂಡಿದೆ. ಜಿಲ್ಲೆಯ ಒಟ್ಟು ಜಾನುವಾರುಗಳ ಸಂತತಿಯಲ್ಲಿ ಶೇ 10ರಷ್ಟು ಇಳಿಕೆಯಾಗಿದೆ.

2024ರ ಡಿ.16ರಿಂದ 2025ರ ಏ.15ರವರೆಗೆ ಗಣತಿ ನಡೆದಿದೆ. 237 ಸಿಬ್ಬಂದಿ ಜಿಲ್ಲೆಯ ಎಲ್ಲ ಗ್ರಾಮ ಹಾಗೂ ವಾರ್ಡ್‌ಗಳನ್ನು ಸುತ್ತಿ ಜಾನುವಾರುಗಳ ಲೆಕ್ಕ ಹಾಕಿದ್ದಾರೆ. ಹಸು, ಎತ್ತು, ಎಮ್ಮೆ ಹಾಗೂ ಮೇಕೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ಕುರಿ ಮತ್ತು ಕೋಳಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2019ರಲ್ಲಿ 6.48 ಲಕ್ಷ ಇದ್ದ ಜಾನುವಾರುಗಳ ಸಂಖ್ಯೆ 2025ರ ಹೊತ್ತಿಗೆ 5.83 ಲಕ್ಷಕ್ಕೆ ಕುಸಿದಿದೆ ಎಂದು ಅಂದಾಜಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಸುತ್ತದೆ. 1919ರಿಂದ ದೇಶದಾದ್ಯಂತ ಆರಂಭವಾದ ಈ ಗಣತಿ 2019ರವರೆಗೆ 20 ಬಾರಿ ನಡೆದಿದೆ. 21ನೇ ಗಣತಿಗೆ 2024ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಕೃಷಿ ಪ್ರಧಾನವಾದ ದಾವಣಗೆರೆ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಡಿಸೆಂಬರ್‌ನಿಂದ ಗಣತಿ ಕಾರ್ಯ ಆರಂಭವಾಗಿತ್ತು.

ADVERTISEMENT

ಹೊಸದಾಗಿ ರೂಪಿಸಿದ ಮೊಬೈಲ್ ಆ್ಯಪ್‌ ಮೂಲಕ ಜಾನುವಾರು ಗಣತಿ ನಡೆಸಲಾಗಿದೆ. ಜಿಲ್ಲೆಯಲ್ಲಿ 175 ಗಣತಿದಾರರು ಹಾಗೂ 62 ಮೇಲ್ವಿಚಾರಕರು ಗಣತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಗಣತಿದಾರರು ಮನೆ–ಮನೆಗೆ ತೆರಳಿ ಜಾನುವಾರುಗಳ ಲೆಕ್ಕ ಹಾಕಿದ್ದಾರೆ. ಮೇಲ್ವಿಚಾರಕರು ಹಾಗೂ ನೋಡೆಲ್‌ ಅಧಿಕಾರಿಗಳು ದತ್ತಾಂಶ ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ.

ಹಸು, ಎತ್ತು, ಎಮ್ಮೆ, ಕೋಣ, ಕುರಿ, ಕೋಳಿ, ಮೇಕೆ, ನಾಯಿ ಸೇರಿ ಕೃಷಿ ಜೊತೆಗೆ ಒಡನಾಟ ಇರುವ ಪ್ರಾಣಿ ಮತ್ತು ಪಕ್ಷಿಗಳ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಿದ್ದಾರೆ. ಜಾನುವಾರು ತಳಿ, ವಯಸ್ಸು, ಸಾಕಣೆಯಲ್ಲಿ ತೊಡಗಿದವರ ವಿವರವನ್ನು ನಮೂದಿಸಿಕೊಂಡಿದ್ದಾರೆ. ಪಶುಪಾಲನೆಯಲ್ಲಿ ತೊಡಗಿಕೊಂಡಿರುವವರ ಶಿಕ್ಷಣ, ಮಹಿಳೆಯರ ಬಗೆಗೂ ದತ್ತಾಂಶ ಸಂಗ್ರಹಿಸಲಾಗಿದೆ. ಈ ಮಾಹಿತಿ ಆನ್‌ಲೈನ್‌ ಮೂಲಕ ಸರ್ಕಾರಕ್ಕೆ ರವಾನೆಯಾಗಿದೆ.

‘ಜಿಲ್ಲೆಯಲ್ಲಿ ಅಮೃತ್‌ ಮಹಲ್‌ ಹಾಗೂ ಹಳ್ಳಿಕಾರ್‌ನಂತಹ ದೇಸಿ ತಳಿಯ ಹಸುಗಳ ಸಂಖ್ಯೆ ಹೆಚ್ಚಾಗಿತ್ತು. ಗಿರ್‌, ಸಾಹಿವಾಲ್‌ ಸೇರಿ ಇತರ ತಳಿಗಳೂ ಇದ್ದವು. ಕಳೆದ ಐದು ವರ್ಷಗಳಲ್ಲಿ ದೇಸಿ ತಳಿಯ ರಾಸುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಎಚ್‌ಎಫ್‌ ಸೇರಿ ಹೆಚ್ಚು ಹಾಲು ಕೊಡುವ ಹಸುಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಪಶುಪಾಲನಾ ಇಲಾಖೆಯ ಮೂಲಗಳು ತಿಳಿಸಿವೆ.

ಗಣತಿಯಲ್ಲಿ ಕೆಲ ಕುತೂಹಲಕಾರಿ ಸಂಗತಿಯಗಳು ಲಭ್ಯವಾಗಿವೆ. ಮನೆಯ ಹಿತ್ತಿಲಲ್ಲಿ ಕೋಳಿಗಳು ಕಡಿಮೆಯಾಗಿವೆ. ಫಾರಂಗಳಲ್ಲಿ ಸಾಕಣೆ ಮಾಡುವ ಕೋಳಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕುರಿ ಸಾಕಣೆಗೆ ಹೊಸಬರು ಪದಾರ್ಪಣೆ ಮಾಡಿದ್ದಾರೆ. ಮಾಂಸ ಮತ್ತು ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಆಗಿರುವ ಈ ಬದಲಾವಣೆಯನ್ನು ಗಣತಿದಾರರು ಗುರುತಿಸಿದ್ದಾರೆ.

‘ಮಾಂಸಕ್ಕೆ ಬಳಕೆಯಾಗುತ್ತಿದ್ದ ಮೇಕೆಗಳ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಹೆಚ್ಚು ಅಲೆದಾಡಿ ಆಹಾರ ಸೇವಿಸುವ ಈ ಪ್ರಾಣಿಯ ಪ್ರವೃತ್ತಿ ಸಾಕಣೆದಾರರಿಗೆ ಇಷ್ಟವಾಗುತ್ತಿಲ್ಲ. ಗಿಡ, ಮರ, ಹುಲ್ಲುಗಾವಲು ಪ್ರಮಾಣ ಕೂಡ ಕಡಿಮೆ ಆಗಿರುವುದು ಹಾಗೂ ಫಾರಂ ವ್ಯವಸ್ಥೆಗೆ ಮೇಕೆ ಹೊಂದಿಕೊಳ್ಳದೇ ಇರುವ ಕಾರಣಕ್ಕೆ ಇವುಗಳ ಸಾಕಾಣಿಕೆಗೆ ಒಲವು ಕಡಿಮೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕೃಷಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಕೂಡ ಜಾನುವಾರು ಸಾಕಣೆ ಮೇಲೆ ಪರಿಣಾಮ ಬೀರಿದೆ. ತೋಟಗಾರಿಕೆ ಕ್ಷೇತ್ರ ಹೆಚ್ಚಾಗಿದ್ದು, ಉಳುಮೆ ಪ್ರದೇಶ ಕುಗ್ಗಿದೆ. ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿರುವ ಕಾರಣಕ್ಕೆ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ಗಣತಿಯ ವೇಳೆ ಗೊತ್ತಾಗಿದೆ.

ಜಾನುವಾರು (ಸಂಗ್ರಹ ಚಿತ್ರ)

Quote - ಗಣತಿಯ ವಿವರಗಳು ಕೇಂದ್ರ ಕಚೇರಿಗೆ ರವಾನೆಯಾಗಿವೆ. ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಹಳೆಯ ಗಣತಿ ಆಧಾರದ ಮೇರೆಗೆ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ ಡಾ.ಎಚ್‌.ಎಂ.ಮಹೇಶ್‌ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

Cut-off box - ಜಾನುವಾರುಗಳ ವಿವರ ಜಾನುವಾರು;20ನೇ ಗಣತಿ;21ನೇ ಗಣತಿ ಹಸು ಎತ್ತು; 223061; ಶೇ 15 ಕಡಿಮೆ ಎಮ್ಮೆ ಕೋಣ;89145;ಶೇ 41 ಕಡಿಮೆ ಮೇಕೆ;77592;ಶೇ 25 ಕಡಿಮೆ ಕುರಿ;234890;ಶೇ 10 ಹೆಚ್ಚಳ ಕೋಳಿ;2455089;ಶೇ 29 ಹೆಚ್ಚಳ

Cut-off box - ಎಮ್ಮೆ ಸಂಖ್ಯೆ ಗಣನೀಯ ಇಳಿಕೆ ‘ಸಂಪತ್ತಿಗೆ ಸವಾಲ್‌’ ಚಿತ್ರದಲ್ಲಿ ಡಾ.ರಾಜಕುಮಾರ್‌ ಅವರಿಂದ ಗುಣಗಾನಕ್ಕೆ ಒಳಗಾಗಿದ್ದ ಎಮ್ಮೆಗಳ ಸಂತತಿ ಅಪಾಯದಲ್ಲಿರುವುದು ಜಾನುವಾರು ಗಣತ್ತಿಯಲ್ಲಿ ಬಹಿರಂಗಗೊಂಡಿದೆ. ಮಾನವನ ಗುಣಕ್ಕೆ ಹೋಲಿಸಿದಾಗ ‘ಸರಿಸಾಟಿಯೇ ಇಲ್ಲ’ ಎಂಬ ಬಣ್ಣನೆಗೆ ಒಳಗಾಗಿದ್ದ ಎಮ್ಮೆ ಮತ್ತು ಕೋಣಗಳ ಸಂಖ್ಯೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2019ರಲ್ಲಿ 89145ರಷ್ಟಿದ್ದ ಎಮ್ಮೆ ಕೋಣಗಳ ಸಂಖ್ಯೆಯಲ್ಲಿ ಶೇ 41ರಷ್ಟು ಕಡಿಮೆಯಾಗಿವೆ. ‘ಎಮ್ಮೆ ಗರ್ಭದರಿಸಲು ಸರಾಸರಿ 3 ವರ್ಷ ಬೇಕಾಗುತ್ತದೆ. ಗರ್ಭದಾರಣೆ ಪ್ರಕ್ರಿಯೆ ಕೂಡ ಕ್ಲಿಷ್ಟಕರವಾಗಿದೆ. ಇದು ಎಮ್ಮೆಗಳ ಸಂತಾನೋತ್ಪತ್ತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಲ್ಲದೇ ಎಮ್ಮೆಗಳನ್ನು ಸಾಕಲು ಹೆಚ್ಚು ಶ್ರಮ ಬೇಕು. ಇವು ಸೇವಿಸುವ ಆಹಾರದ ಪ್ರಮಾಣವೂ ಅಧಿಕ. ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಎಮ್ಮೆಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.