ADVERTISEMENT

ದಾವಣಗೆರೆ | ಲೋಕ ಅದಾಲತ್‌; ಮತ್ತೆ ಒಂದಾದ 17 ಜೋಡಿ

ನ್ಯಾಯಾಧೀಶರ ಸಮ್ಮುಖದಲ್ಲಿ ಮುನಿಸು ಮರೆತು ಹಾರ ಬದಲಿಸಿಕೊಂಡರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:55 IST
Last Updated 13 ಜುಲೈ 2024, 15:55 IST
ದಾವಣಗೆರೆಯ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ ಜೋಡಿಗಳಿಗೆ ನ್ಯಾಯಾಧೀಶರು ಶುಭ ಹಾರೈಸಿದರು
ದಾವಣಗೆರೆಯ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ ಜೋಡಿಗಳಿಗೆ ನ್ಯಾಯಾಧೀಶರು ಶುಭ ಹಾರೈಸಿದರು   

ದಾವಣಗೆರೆ: ಇನ್ನು ಒಟ್ಟಾಗಿ ಸಂಸಾರ ನಡೆಸಲು ಸಾಧ್ಯವೇ ಇಲ್ಲವೆಂದು ಜೀವನಾಂಶ ಹಾಗೂ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ 17 ಜೋಡಿಗಳು, ಮತ್ತೆ ಒಂದಾಗಿ ಬಾಳಲು ನಿರ್ಧರಿಸಿವೆ.

ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇನ್ನೇನು ವಿಚ್ಛೇದನ ಪಡೆದು ಬೇರೆಯಾಗುವ ಹಂತದಲ್ಲಿದ್ದ ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದವು.

ಒಂದೂವರೆ ವರ್ಷದ ಹಿಂದೆ ಮದುವೆಯಾದ ಜೋಡಿಯಿಂದ ಹಿಡಿದು 25 ವರ್ಷಗಳಿಗೂ ಹೆಚ್ಚಿನ ವಿವಾಹಬಂಧ ಹೊಂದಿದ್ದ ಜೋಡಿಗಳು ಮುನಿಸು, ಮನಸ್ತಾಪ ಮರೆತು ಒಬ್ಬರಿಗೊಬ್ಬರು ಹಾರ ಬದಲಿಸಿಕೊಂಡು, ಸಿಹಿ ತಿನ್ನಿಸಿ ಸಹಜೀವನ ನಡೆಸಲು ಮತ್ತೆ ಹೆಜ್ಜೆ ಇಟ್ಟರು.

ADVERTISEMENT

‘ಲೋಕ ಅದಾಲತ್‌ ಪ್ರಕ್ರಿಯೆ ಅತಿ ಸರಳ, ಇಲ್ಲಿ ಏನೇ ವ್ಯಾಜ್ಯ ಇದ್ದರೂ ರಾಜಿಗೆ ಮೊದಲ ಆದ್ಯತೆ. ನ್ಯಾಯಾಧೀಶರು ಮತ್ತು ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

‘ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದು ಮಾಡದೆ, ಸುಖ ಜೀವನ ನಡೆಸುವುದೇ ಜೀವನ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 40,000 ಕ್ಕೂ ಹೆಚ್ಚು ಪ್ರಕರಣಗಳು ಜಾರಿಯಲ್ಲಿದ್ದು, ಇವುಗಳಲ್ಲಿ 8,000 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಬಹುದು ಎಂದು ಗುರುತಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಹೇಳಿದರು.

‘ತಮ್ಮಲ್ಲಿ ಬರುವಂತಹ ಜೋಡಿಗಳ ಮನವೊಲಿಸಿ ಸಂಧಾನಕ್ಕೆ ವಕೀಲರೇ ಸಜ್ಜುಗೊಳಿಸುವರು. ಈ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ವಕೀಲರ ಪಾತ್ರವೂ ಮುಖ್ಯವಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್.ಎಲ್.ಎಚ್ ಹೇಳಿದರು.

‘ಸಾಮಾಜಿಕ ಜವಾಬ್ದಾರಿಯಿಂದ ಮತ್ತು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ತಮ್ಮ ಪ್ರಕರಣಗಳನ್ನು ತ್ಯಾಗ ಮಾಡಿ ಜೋಡಿಗಳನ್ನು ಒಂದು ಮಾಡಿಸುವಂತಹ ಗುರುತರ ಜವಾಬ್ದಾರಿ ವಕೀಲರ ಮೇಲಿದೆ’ ಎಂದು ತಿಳಿಸಿದರು.

ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಣ್ಣಯ್ಯನವರ್ ಎಂ.ಎಚ್., ಕೌಟುಂಬಿಕ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೇರಿ, ಎರಡನೇ ಸೆಷನ್ಸ್ ಜಿಲ್ಲಾ ನ್ಯಾಯಾಧೀಶ ಪ್ರವೀಣ್ ಕುಮಾರ್ ಎನ್., ಮಕ್ಕಳ ಶಾಲೆಯ ನ್ಯಾಯಾಧೀಶ ಶ್ರೀರಾಮ್ ಹೆಗಡೆ, ವಕೀಲ ಸಂಧಾನಕಾರರಾದ ಭಾಗ್ಯಲಕ್ಷ್ಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

7944 ಪ್ರಕರಣಗಳು ಇತ್ಯರ್ಥ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದ ಲೋಕ್ ಅದಾಲತ್‌ನಲ್ಲಿ ಒಟ್ಟು 7944 ಪ್ರಕರಣಗಳು ಇತ್ಯರ್ಥಗೊಂಡಿದ್ದು ₹ 18.37 ಕೋಟಿ  ಹಣದ ಪರಿಹಾರ ಆಗಿದೆ. 249729 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿದ್ದು ₹ 104.20 ಕೋಟಿ ಹಣದ ಪರಿಹಾರವಾಗಿದೆ.  ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ 15 ಜೋಡಿಗಳು ಹರಿಹರ ನ್ಯಾಯಾಲಯದಲ್ಲಿ 2 ಜೋಡಿಗಳು ಒಟ್ಟು 17 ಜೋಡಿಗಳು ಲೋಕ್ ಅದಾಲತ್ ಮೂಲಕ ಮತ್ತೆ ಒಂದಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.