ಆರ್.ಎಚ್. ಅರ್ಜುನ್
ದಾವಣಗೆರೆ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ‘ಬೆಸ್ಕಾಂ’ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಹಾಗೂ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಶೇ 72ರಷ್ಟು ಹೆಚ್ಚುವರಿ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ಅರ್ಜುನ್ ಅವರ ಬಳಿ 2 ನಿವೇಶನ, 3 ಮನೆ ಹಾಗೂ ಇತ್ತೀಚೆಗೆ ಖರೀದಿಸಿದ್ದ 2 ಎಕರೆ ಕೃಷಿ ಭೂಮಿ ಪತ್ತೆಯಾಗಿದೆ. ಚಿನ್ನಾಭರಣವನ್ನು ಅಡವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರಿದಿದೆ.
ಮೂಲತಃ ಶಿವಮೊಗ್ಗದ ಅರ್ಜುನ್ ಅವರು ‘ಬೆಸ್ಕಾಂ’ ದಾವಣಗೆರೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಸಿದ್ದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ದೂರುಗಳು ಬಂದಿದ್ದವು. ಶಿವಮೊಗ್ಗದ ಗೋಪಾಳದದಲ್ಲಿರುವ ಮನೆ, ವಾಣಿಜ್ಯ ಸಂಕೀರ್ಣ, ರಿಪ್ಪನ್‌ಪೇಟೆಯ ತಳಲೆ ಬಳಿಯ ತೋಟದ ಮನೆ, ದಾವಣಗೆರೆಯ ನಿಟುವಳ್ಳಿ ಬಡಾವಣೆಯ ರೂಂ ಹಾಗೂ ‘ಬೆಸ್ಕಾಂ’ ಕಚೇರಿಯ ಮೇಲೆ ದಾವಣಗೆರೆ ಮತ್ತು ಶಿವಮೊಗ್ಗ ಲೋಕಾಯುಕ್ತ ಪೊಲೀಸರು 5 ತಂಡಗಳಾಗಿ ಏಕಕಾಲಕ್ಕೆ ದಾಳಿ ನಡೆಸಿದ್ದರು.
‘ಅರ್ಜುನ್ ಬಳಿ ನಿವೇಶನ, ಮನೆ ಹಾಗೂ ಜಮೀನು ಪತ್ತೆಯಾಗಿವೆ. ನಗದು ಹಾಗೂ ಚಿನ್ನಾಭರಣ ಸಿಕ್ಕಿಲ್ಲ. ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಲೊಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.