ADVERTISEMENT

ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸಿದವರಿಗೆ 55 ಸಾವಿರ ಆರ್ಥಿಕ ನೆರವು: ಸಚಿವ ಭರವಸೆ

ಕೋವಿಡ್–19 ಹಿನ್ನೆಲೆ: ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 8:10 IST
Last Updated 15 ಆಗಸ್ಟ್ 2020, 8:10 IST
74ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಗಾಗಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಧ್ವಜಾರೋಹಣ ನೇರವೆರಿಸಿ ಮಾತನಾಡಿದರು –ಪ್ರಜಾವಾಣಿ ಚಿತ್ರ
74ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಗಾಗಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಧ್ವಜಾರೋಹಣ ನೇರವೆರಿಸಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೊರೊನಾ ನಡುವೆಯೇ ಅಂತರ ಕಾಯ್ದುಕೊಂಡು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಧ್ವಜಾರೋಹಣ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿ,‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರಿಗೆ ₹5 ಸಾವಿರದಂತೆ 55,117 ಮಂದಿಯ ಖಾತೆಗಳಿಗೆ ನೇರವಾಗಿ ಹಣ ನೀಡಲಾಗಿದೆ.ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 1,59,709 ರೈತರು ನೋಂದಣಿ ಮಾಡಿಸಿದ್ದು, 1,46,595 ರೈತರಿಗೆ ₹109 ಕೋಟಿ ಜಮಾ ಮಾಡಲಾಗಿದೆ’ ಎಂದು ಸಚಿವರು ಹೇಳಿದರು.

‘ಕೋವಿಡ್–19 ತಂದೊಡ್ಡಿದ ಬೃಹತ್ ಸವಾಲು, ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ಸರ್ಕಾರದ ಆದಾಯದ ನಷ್ಟದಂತಹ ಸಂದಿಗ್ದ ಸಮಸ್ಯೆಗಳ ನಡುವೆಯೂ ಶಾಂತಿ, ನೆಮ್ಮದಿ ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬರದ ಛಾಯೆ ಆವರಿಸಿತ್ತು. ಆನಂತದ ದಿನಗಳಲ್ಲಿ ಜಲಪ್ರಳಯ ಸಂಭವಿಸಿತು. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ರಮ ಕೈಗೊಳ್ಳಲಾಯಿತು’ ಎಂದು ಹೇಳಿದರು.

ಕೊರೊನಾ ಸಂಕಷ್ಟದಿಂದ ಎದುರಾದ ಲಾಕ್‌ಡೌನ್ ಪರಿಣಾಮ ಎಲ್ಲಾ ವರ್ಗದ ಜನರು ಸಂಕಷ್ಟ ಅನುಭವಿಸುವಂತಾಯಿತು. ಈ ವೇಳೆ ₹2272 ಕೋಟಿಗಳ ಪ್ಯಾಕೇಜ್ ಘೋಷಿಸುವ ಸರ್ಕಾರ ನೆರವಿಗೆ ಬಂತು’ ಎಂದರು.

‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಒಂದು ವರ್ಷದಲ್ಲಿ 2,80.204 ಮಾನವ ದಿನಗಳ ಸೃಜನೆ ಮಾಡಿದ್ದು, ₹7.62 ಕೋಟಿ ಭರಿಸಲಾಗಿದೆ. 2,859 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಮತ್ತು ತರಕಾರಿ ಬೆಳೆದು ನಷ್ಟ ಅನುಭವಿಸಿದ ಜಿಲ್ಲೆಯ 4,179 ರೈತರಿಗೆ ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ನಷ್ಟ ಅನುಭವಿಸಿದ ಹೂ ಬೆಳೆಗಾರರಿಗೆ ₹23.16 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದ‌ರು.

ಹೆಚ್ಚುವರಿ 40 ಐಸೊಲೇಷನ್ ಬೆಡ್

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 250 ಐಸೊಲೇಷನ್ ಬೆಡ್‌ಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ ನಾಲ್ಕು ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಐಸೊಲೇಷನ್ ಬೆಡ್‌ಗಳನ್ನ ಸ್ಥಾಪಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ 40 ಐಸೊಲೇಟೆಡ್ ಬೆಡ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕೊರೊನಾ ವಾರಿಯರ್ಸ್‌ಗಳಾದ ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಶಕ್ತಿವರ್ಧಕ ಔಷಧಗಳಾದ ಚ್ಯವನ್‌ ಪ್ರಾಶ್, ಕಷಾಯ ಚೂರ್ಣ, ಅರ್ಸೆನಿಕ್ ಆಲ್ಬಾ ಮಾತ್ರೆಗಳನ್ನು ವಿತರಿಸಲಾಗಿದೆ. ಕೋವಿಡ್ ಕೇರ್‌ ಸೆಂಟರ್‌ಗಳಲ್ಲೂ ಆಯುಷ್ ರೋಗ ನಿರೋಧಕ ಶಕ್ತಿವರ್ಧಕಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ತುಮಕೂರು–ಚಿತ್ರದುರ್ಗ–ದಾವಣಗೆರೆ ರೈಲ್ವೆ ಹೊಸ ಬ್ರಾಡ್‌ಗೇಜ್ ಯೋಜನೆ

‘ಜಿಲ್ಲೆಗೆ ಸಂಬಂಧಿಸಿದ 5ನೇ ಹಂತದಲ್ಲಿ ರೈಲ್ವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಮೊದಲನೇ ಕಂತಿನಲ್ಲಿ ₹60 ಕೋಟಿ ಅನುದಾನ ಮಂಜೂರಾಗಿದ್ದು, ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. ಎರಡನೆಯ ಕಂತು ₹60 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದ್ದು, ₹120 ಕೋಟಿ ವೆಚ್ಚದ ಕಾಮಗಾರಿ ಆರಂಭಿಸುವ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದು ಸಚಿವರು ತಿಳಿಸಿದರು.

‘ಹುಬ್ಬಳ್ಳಿ–ಚಿಕ್ಕಜಾಜೂರು ರೈಲ್ವೆ ಟ್ರ್ಯಾಕ್ ಡಬ್ಲಿಂಗ್ ಯೋಜನೆ ಸಂಬಂಧ ದಾವಣಗೆರೆ ತಾಲ್ಲೂಕಿನ ನಾಲ್ಕು, ಹರಿಹರ ತಾಲ್ಲೂಕಿನ ಮೂರು ಗ್ರಾಮಗಳಿಗೆ 4.17 ಎಕರೆ ಜಮೀನನ್ನು ಖರೀದಿಸಿದ್ದು, ₹1.39 ಕೋಟಿಯನ್ನು ಭೂಮಾಲೀಕರಿಗೆ ನೀಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಕ್ರೀಡಾಂಗಣ ಬಣ ಬಣ

ಕೋವಿಡ್–19 ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನದಂದು ಜಿಲ್ಲಾ ಕ್ರೀಡಾಂಗಣ ಬಣಗುಡುತ್ತಿತ್ತು. ಪ್ರತಿ ವರ್ಷ ಶಾಲಾ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಗೀತೆಗಳ ಗಾಯನ ಹಾಗೂ ನೃತ್ಯಗಳು ನಡೆಯುತ್ತಿದ್ದವು. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇರಲಿಲ್ಲ.

ಪೊಲೀಸ್, ಅಬಕಾರಿ, ಅರಣ್ಯ, ಅಗ್ನಿಶಾಮಕದಳದ ಪಥ ಸಂಚಲನಗಳು ಗಮನ ಸೆಳೆದವು. ತೆರೆದ ಜೀಪಿನಲ್ಲಿ ಕವಾಯತು ವೀಕ್ಷಣೆ ನಡೆಸಿದ ನಂತರ ಪಥ ಸಂಚಲನ ತಂಡಗಳು ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.

ಕೋವಿಡ್ ವಾರಿಯರ್ಸ್‌ಗಳು, 60 ಪ್ರಕರಣಗಳನ್ನು ಬೇಧಿಸಲು ನೆರವಾದ ಪೊಲೀಸ್ ಇಲಾಖೆಯ ಶ್ವಾನ ‘ತುಂಗಾ’ಳನ್ನು ಗೌರವಿಸಲಾಯಿತು. ಅಂಗವಿಕಲರಿಗೆ ವಾಹನ ವಿತರಿಸಲಾಯಿತು.

ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ.ಅಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಪಿಎಂಸಿ ಕಾರ್ಯದರ್ಶಿ ಜೆ.ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.