ADVERTISEMENT

ಹೊನ್ನಾಳಿ | ಒಳ ಮೀಸಲಾತಿ ಹಂಚಿಕೆ; ಸಿಹಿ ಹಂಚಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:18 IST
Last Updated 22 ಆಗಸ್ಟ್ 2025, 6:18 IST
ಹೊನ್ನಾಳಿ ತಾಲ್ಲೂಕು ಮಾದಿಗ ಸಮುದಾಯದ ವತಿಯಿಂದ ಒಳ ಮೀಸಲಾತಿ ಆದೇಶ ಕುರಿತು ಸಂಭ್ರಮಾಚರಣೆ ನಡೆಸಲಾಯಿತು
ಹೊನ್ನಾಳಿ ತಾಲ್ಲೂಕು ಮಾದಿಗ ಸಮುದಾಯದ ವತಿಯಿಂದ ಒಳ ಮೀಸಲಾತಿ ಆದೇಶ ಕುರಿತು ಸಂಭ್ರಮಾಚರಣೆ ನಡೆಸಲಾಯಿತು   

ಹೊನ್ನಾಳಿ: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿರುವುದನ್ನು ತಾಲ್ಲೂಕು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ತಾಲ್ಲೂಕು ಮಾದಿಗ ಸಮುದಾಯದ ಅಧ್ಯಕ್ಷ ಜಿ.ಎಚ್. ತಮ್ಮಣ್ಣ ದಿಡಗೂರು ಹೇಳಿದರು.

ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಮಾತನಾಡಿದರು.

35 ವರ್ಷಗಳಿಂದ ಹಗಲಿರುಳು ಮಾಡಿದ ಹೋರಾಟಕ್ಕೆ ಸಂದ ಪ್ರತಿಫಲ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಳೆದು ತೂಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಡೀ ಸಚಿವ ಸಂಪುಟ ಕೂಡಾ ಇದನ್ನು ಒಪ್ಪಿಕೊಂಡಿದ್ದು ಖುಷಿ ತಂದಿದೆ. ಪ್ರವರ್ಗ ‘ಎ’ನಲ್ಲಿ 18 ಜಾತಿಗಳಿದ್ದು, ಅದಕ್ಕೆ ಶೇ 6, ಪ್ರವರ್ಗ ‘ಬಿ’ನಲ್ಲಿ 20 ಜಾತಿಗಳು ಇದ್ದು, ಅದಕ್ಕೆ ಶೇ 6 ರಷ್ಟು ಒಳಮೀಸಲಾತಿ ಹಾಗೂ ಪ್ರವರ್ಗ ‘ಸಿ’ ಗೆ 59 ಪ್ಲಸ್ 3 ಜಾತಿಗಳನ್ನು ಸೇರಿಸಿ ಶೇ 5 ರಷ್ಟು ಮೀಸಲಾತಿ ನಿಗದಿ ಮಾಡಿರುವುದು ಸಂತೋಷ ತಂದಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ADVERTISEMENT

ಕೆಲವು ವಿಪಕ್ಷಗಳ ಮುಖಂಡರು ಇದನ್ನು ಸ್ವಾಗತಿಸುವ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ರಾಜ್ಯದ ಇಡೀ ಮಾದಿಗ ಸಮುದಾಯ ಈ ತೀರ್ಪಿಗೆ ಸಾಕಷ್ಟು ಹೋರಾಟ ಮಾಡಿದೆ. ಕೆಲವರು ಪ್ರಾಣತ್ಯಾಗ ಮಾಡಿದ್ದಾರೆ. ಸಾವಿರಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹೋರಾಟಗಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಇನ್ನುಮುಂದೆ ಒಳಮೀಸಲಾತಿ ಹೋರಾಟ ಇಲ್ಲಿಗೆ ಮುಗಿದ ಅಧ್ಯಾಯ ಎಂದು ತಿಳಿಸಿದರು.

ಮಾದಿಗ ಸಮುದಾಯದ ಮುಖಂಡರಾದ ಕೆಂಗಲಹಳ್ಳಿ ಪ್ರಭಾಕರ್, ಮಾರಿಕೊಪ್ಪ ಮಂಜು, ರಾಜು ಮಲ್ಲಿಗೇನಹಳ್ಳಿ, ಹನುಮಂತಪ್ಪ, ಗೋವಿನಕೋವಿ ನರಸಿಂಹಪ್ಪ, ರಾಜು, ಬೇಲಿಮಲ್ಲೂರು ಅಣ್ಣಪ್ಪ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.