ADVERTISEMENT

ಡಿ.ಬಿ.ಕೆರೆ: ವೈಭವದ ಮೈಲಾರಲಿಂಗೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:57 IST
Last Updated 7 ಫೆಬ್ರುವರಿ 2026, 2:57 IST
ಮಲೇಬೆನ್ನೂರು ಸಮೀಪದ ದೇವರಬೆಳಕೆರೆಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿಯ ರಥೋತ್ಸವ ಶುಕ್ರವಾರ ಗೋದೂಳಿ ಲಗ್ನದಲ್ಲಿ ವೈಭವದಿಂದ ನಡೆಯಿತು
ಮಲೇಬೆನ್ನೂರು ಸಮೀಪದ ದೇವರಬೆಳಕೆರೆಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿಯ ರಥೋತ್ಸವ ಶುಕ್ರವಾರ ಗೋದೂಳಿ ಲಗ್ನದಲ್ಲಿ ವೈಭವದಿಂದ ನಡೆಯಿತು   

ಮಲೇಬೆನ್ನೂರು: ಸಮೀಪದ ದೇವರಬೆಳಕೆರೆಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಗೋದೂಳಿ ಲಗ್ನದಲ್ಲಿ ವೈಭವಯುತವಾಗಿ ಜರುಗಿತು.

ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ಹಾಕಿದ ನಂತರ ರಥಶಾಂತಿ ಮಾಡಲಾಯಿತು. ದೇವಾಲಯ ಸಮಿತಿ ವತಿಯಿಂದ ದೇವರ ಪಟ, ಹೂವಿನಹಾರ, ಧ್ವಜ, ತೆಂಗಿನಕಾಯಿ ಹಾಗೂ ನಿಂಬೆಹಣ್ಣು ಹರಾಜು ಹಾಕಲಾಯಿತು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ಉತ್ತುತ್ತಿ, ಬಾಳೆಹಣ್ಣನ್ನು ಕಳಸಕ್ಕೆ ಎಸೆದು ನಮಿಸಿದರು. ಈ ವೇಳೆ ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ ಚಾಂಗಮಲೋ... ಎಂಬ ಉದ್ಘೋಷ ಮುಗಿಲು ಮುಟ್ಟಿತ್ತು.

ಕೊಂಬು ಕಹಳೆ, ಮಂಗಳವಾದ್ಯ, ಡೊಳ್ಳು, ತಮಟೆ, ಜಾಂಚ್‌ ಮೇಳ, ಭಂಡಾರ ಧರಿಸಿ ಢಮರುಗ ಬಾರಿಸುವ ಗೊರವರು, ಚಾಮರ ಬೀಸುವವರು, ದೀವಟಿಗೆ ಹಿಡಿದ ಭಕ್ತರಿಂದ ಉತ್ಸವದ ಮೆರಗು ಹೆಚ್ಚಿತ್ತು. 

ADVERTISEMENT

ರಥವನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮುಖ್ಯಬೀದಿ ಹಾಗೂ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕಡ್ಲೆಗೊಂದಿ, ಗುಳದಹಳ್ಳಿ, ಹಳೆ ಊರಿನ ದುರ್ಗಾದೇವಿ ಹಾಗೂ ಬಸವೇಶ್ವರ ದೇವರ ಉತ್ಸವಮೂರ್ತಿ ಇರಿಸಿದ್ದ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು. ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು.

ದೇವಾಲಯ ಅಕ್ಕಪಕ್ಕ ಹಾಗೂ ರಾಜಬೀದಿಯಲ್ಲಿ ಬಳೆ, ಅರಿಶಿಣ–ಕುಂಕುಮ, ಪೂಜಾ ಸಾಮಗ್ರಿ, ಬಲೂನು, ಆಟಿಕೆ ಸಾಮಾನು, ಸಿಹಿ ತಿಂಡಿ ಅಂಗಡಿಗಳ ಜಾತ್ರೆ ನೆರೆದಿತ್ತು. 

ಕಾಲಶಸ್ತ್ರ ಪವಾಡ: ಮೈಲಾರ ಜಾತ್ರೆ ನಂತರ ‘ರಥೋತ್ಸವ’, ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ನಡೆಸುವುದು ಸಂಪ್ರದಾಯ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ದೇವಾಲಯದ ಆವರಣದಲ್ಲಿ ಫೆ.7ರಂದು ಸಂಜೆ ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.