ADVERTISEMENT

ದಾವಣಗೆರೆ: ಶುರುವಾಗದ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ

ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಎಪಿಎಂಸಿ ಖರೀದಿ ಕೇಂದ್ರಗಳಿಗೆ ರೈತರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:47 IST
Last Updated 14 ಡಿಸೆಂಬರ್ 2025, 7:47 IST
ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಮೆಕ್ಕೆಜೋಳ– ಸಂಗ್ರಹ ಚಿತ್ರ
ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಮೆಕ್ಕೆಜೋಳ– ಸಂಗ್ರಹ ಚಿತ್ರ   

ದಾವಣಗೆರೆ: ‘ದಾವಣಗೆರೆ ಶುಗರ್‌ ಕಂಪನಿ ಲಿಮಿಟೆಡ್‌’ ಡಿಸ್ಟಿಲರಿಯು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಲ್ಲಿ (ಕೆಎಸ್‌ಸಿಎಂಎಫ್‌) ಹಣವನ್ನು ಠೇವಣಿ ಮಾಡದ ಪರಿಣಾಮ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಇದರಿಂದ ಜಿಲ್ಲಾಡಳಿತ ಗುರುತಿಸಿದ ಖರೀದಿ ಕೇಂದ್ರಗಳಿಗೆ ರೈತರು ಅಲೆದಾಡುವಂತಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ದಾವಣಗೆರೆ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಆವರಣ ಹಾಗೂ ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಜಿಲ್ಲಾಡಳಿತ ಗುರುತಿಸಿದೆ. ಡಿ.10ರಿಂದ ಖರೀದಿ ಪ್ರಕ್ರಿಯೆ ಆರಂಭಕ್ಕೆ ಸೂಚನೆ ನೀಡಿತ್ತು. ಎರಡು ದಿನ ಕಳೆದರೂ ನೋಂದಣಿ, ಖರೀದಿ ಪ್ರಕ್ರಿಯೆ ಶುರುವಾಗಿಲ್ಲ.

ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸರ್ಕಾರ ಡಿಸ್ಟಿಲರಿಗಳಿಗೆ ಸೂಚನೆ ನೀಡಿದೆ. ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದಲ್ಲಿ ಮಾತ್ರ ಡಿಸ್ಟಿಲರಿ ಇದೆ. ಇದರ 20 ಕಿ.ಮೀ ವ್ಯಾಪ್ತಿಯಲ್ಲಿ ಕೇಂದ್ರವನ್ನು ತೆರೆದು ಮೆಕ್ಕೆಜೋಳ ಖರೀದಿಸಲು ಅವಕಾಶವಿದೆ. ಈ ಹೊಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ನೀಡಲಾಗಿದೆ. ಕುಕ್ಕವಾಡ ಹಾಗೂ ಆವರಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮೆಕ್ಕೆಜೋಳ ಖರೀದಿಗೆ ಕೆಎಸ್‌ಸಿಎಂಎಫ್‌ ನಿರ್ಧರಿಸಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ.

ADVERTISEMENT

ಖರೀದಿ ಕೇಂದ್ರಗಳಿಗೆ ಅಲೆದಾಟ:

ಖರೀದಿ ಕೇಂದ್ರ ಆರಂಭಿಸಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡುತ್ತಿದ್ದಂತೆ ರೈತರು ಹರ್ಷಗೊಂಡಿದ್ದರು. ಕುಕ್ಕವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಪಿಎಂಸಿಯತ್ತ ಮುಖ ಮಾಡಿದ್ದಾರೆ. ಪಹಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಹಿಡಿದು ಕೇಂದ್ರಗಳ ಬಾಗಿಲು ಬಡಿಯುತ್ತಿದ್ದಾರೆ. ಆದರೆ, ಖರೀದಿ ಪ್ರಕ್ರಿಯೆ ಆರಂಭವಾಗದ ಪರಿಣಾಮ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

‘ಮೆಕ್ಕೆಜೋಳ ಖರೀದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖರೀದಿಸಿದ ಮೆಕ್ಕೆಜೋಳವನ್ನು ಹದಡಿ ಗ್ರಾಮದ ಗೋದಾಮಿಗೆ ಸಾಗಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ಡಿಸ್ಟಿಲರಿ ಹಣ ಠೇವಣಿ ಇಡದ ಪರಿಣಾಮ ಖರೀದಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ’ ಎಂದು ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರೊಬ್ಬರು ವಿವರಿಸಿದರು.

ಜಿಲ್ಲೆಯ 1.28 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸಲು ಅವಕಾಶವಿದೆ. ಪ್ರತಿ ಕ್ವಿಂಟಲ್‌ಗೆ ಸರ್ಕಾರ ₹ 2,400 ಬೆಂಬಲ ಬೆಲೆ ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದ್ದರಿಂದ ರೈತರು ಖರೀದಿ ಕೇಂದ್ರಗಳನ್ನು ಎದುರು ನೋಡುತ್ತಿದ್ದಾರೆ.

ಮೆಕ್ಕೆಜೋಳ ದಾಸ್ತಾನು ಇಟ್ಟುಕೊಳ್ಳಲು ರೈತರಿಗೆ ಸಾಧ್ಯವಿಲ್ಲ. ಖರೀದಿ ಕೇಂದ್ರ ವಿಳಂಬವಾದಷ್ಟು ಡಿಸ್ಟಿಲರಿ ಮಾಲೀಕರಿಗೆ ಅನುಕೂಲವಾಗಲಿದೆ. ಸರ್ಕಾರ ರೈತರನ್ನು ವಂಚಿಸುತ್ತಿದೆ
ಬಿ.ಎಂ. ಸತೀಶ್‌ ಕೋಳೆನಹಳ್ಳಿ ಮುಖಂಡ ಜಿಲ್ಲಾ ರೈತ ಒಕ್ಕೂಟ

ಅರ್ಧದಷ್ಟು ಠೇವಣಿ ಕಡ್ಡಾಯ

ಧಾನ್ಯ ಆಧಾರಿತ ಎಥೆನಾಲ್‌ ಉತ್ಪಾದಿಸುವ ಡಿಸ್ಟಲಿರಿಗಳಿಗೆ ಅಗತ್ಯವಿರುವ ಮೆಕ್ಕೆಜೋಳದ ಶೇ 50ರಷ್ಟನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸರ್ಕಾರ ಸೂಚಿಸಿದೆ. ಈ ಪ್ರಕಾರ ‘ದಾವಣಗೆರೆ ಶುಗರ್‌ ಕಂಪನಿ ಲಿಮಿಟೆಡ್‌’ 729.50 ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಖರೀದಿಸಬೇಕಿದೆ. ಖರೀದಿ ಕೇಂದ್ರಕ್ಕೆ ರೈತರು ಮೆಕ್ಕೆಜೋಳ ಮಾರಾಟ ಮಾಡಿದ ಮೂರು ದಿನಗಳ ಒಳಗಾಗಿ ನೇರ ನಗದು (ಡಿಬಿಟಿ) ಮೂಲಕ ಹಣ ಪಾವತಿಸಬೇಕು. ಇದಕ್ಕೆ ಡಿಸ್ಟಿಲರಿಗೆ ನಿಗದಿಪಡಿಸಿದ ಮೆಕ್ಕೆಜೋಳದ ಅರ್ಧ ಪ್ರಮಾಣದಷ್ಟು ಹಣವನ್ನು ಕೆಎಸ್‌ಸಿಎಂಎಫ್‌ಗೆ ಠೇವಣಿ ಇಡಬೇಕು. ಆದರೆ ‘ದಾವಣಗೆರೆ ಶುಗರ್‌ ಕಂಪನಿ ಲಿಮಿಟೆಡ್‌’ ಈ ಹಣವನ್ನು ಠೇವಣಿ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.