ADVERTISEMENT

ಮೆಕ್ಕೆಜೋಳ ಖರೀದಿಗೆ ಹಿಂದೇಟು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ

ಬೆಂಬಲೆ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಹಿಂದೇಟು, ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:22 IST
Last Updated 4 ಫೆಬ್ರುವರಿ 2026, 3:22 IST
ಖರೀದಿ ಕೇಂದ್ರದಲ್ಲಿ ತಿರಸ್ಕರಿಸಿದ ಮೆಕ್ಕೆಜೋಳದೊಂದಿಗೆ ದಾವಣಗೆರೆ ಜಿಲ್ಲಾಡಳಿತ ಭವನಕ್ಕೆ ಧಾವಿಸಿದ ರೈತರು ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಖರೀದಿ ಕೇಂದ್ರದಲ್ಲಿ ತಿರಸ್ಕರಿಸಿದ ಮೆಕ್ಕೆಜೋಳದೊಂದಿಗೆ ದಾವಣಗೆರೆ ಜಿಲ್ಲಾಡಳಿತ ಭವನಕ್ಕೆ ಧಾವಿಸಿದ ರೈತರು ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳವನ್ನು ಕಳಪೆ ಗುಣಮಟ್ಟದ ನೆಪವೊಡ್ಡಿ ತಿರಸ್ಕರಿಸುತ್ತಿರುವುದರಿಂದ ಅಸಮಾಧಾನಗೊಂಡ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮೆಕ್ಕೆಜೋಳ ತುಂಬಿದ ಟ್ರ್ಯಾಕ್ಟರ್‌ಗಳೊಂದಿಗೆ ಜಿಲ್ಲಾಡಳಿತ ಭವನದ ಆವರಣ ಪ್ರವೇಶಿಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳು 455 ಮೆಟ್ರಿಕ್ ಟನ್ ಹಾಗೂ ಎಸ್.ಎಸ್. ಗಣೇಶ್ ಮಾಲೀಕತ್ವದ ಕುಕ್ಕುವಾಡ ಶುಗರ್ ಡಿಸ್ಟಿಲರಿ 729 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳಿಗೆ ಮೆಕ್ಕೆಜೋಳ ಪೂರೈಸುವ ರೈತರು ಅವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮೆಕ್ಕೆಜೋಳವನ್ನು ಮಾರುಕಟ್ಟೆಗೆ ತಂದಾಗ ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

‘ಖರೀದಿ ಕೇಂದ್ರಗಳಲ್ಲಿ ಮೆಕ್ಕೆಜೋಳದ ಗುಣಮಟ್ಟ ಪರೀಕ್ಷೆಗೆ ಕೃಷಿ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಬೇಕು. ಆದರೆ, ಕುಕ್ಕುಟೋದ್ಯಮದ ಪ್ರತಿನಿಧಿಗಳು ಗುಣಮಟ್ಟ ನಿಯಂತ್ರಕರಂತೆ ವರ್ತಿಸುತ್ತಿದ್ದಾರೆ. ತೇವಾಂಶ ಕಡಿಮೆ ಇದ್ದ ಮೆಕ್ಕೆಜೋಳವನ್ನು ಕೂಡ ತಿರಸ್ಕರಿಸಲಾಗುತ್ತಿದೆ. ಇದರಿಂದ ರೈತರು ರೋಸಿ ಹೋಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ಮಾಡಬೇಕು’ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಶಿವಕುಮಾರ್‌ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಮಹೇಶ್‌ ಧಾವಿಸಿ ಪ್ರತಿಭಟನಕಾರರ ಬೇಡಿಕೆಗಳನ್ನು ಆಲಿಸಿದರು. ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರಿಗೆ ಸೂಕ್ತ ನಿರ್ದೇಶನ ನೀಡುವ ಆಶ್ವಾಸನೆ ಕೊಟ್ಟರು.

ರೈತ ಮುಖಂಡರಾದ ತುಂಬಿಗೆರೆ ದಿನೇಶಗೌಡ, ಐಗೂರು ಸಿ.ನಾಗರಾಜಪ್ಪ, ಸಿದ್ದೇಶ್, ಮರಿಕುಂಟೆ ಚಂದ್ರಪ್ಪ ಹಾಜರಿದ್ದರು.

ಖರೀದಿ ಕೇಂದ್ರದಲ್ಲಿ ಮಂಗಳವಾರ ಒಂದೇ ದಿನ 8 ಟ್ರ್ಯಾಕ್ಟರ್‌ ಮೆಕ್ಕೆಜೋಳವನ್ನು ತಿರಸ್ಕರಿಸಲಾಗಿದೆ. ಹಳ್ಳಿಗಳಿಂದ ಮೆಕ್ಕೆಜೋಳ ತಂದಿರುವ ರೈತರಿಗೆ ಅನ್ಯಾಯವಾಗುತ್ತಿದೆ
ಆಲೂರು ದೇವರಾಜು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.