ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೀಜ ಬಿತ್ತನೆ ಕಾರ್ಯವು ಜಿಲ್ಲೆಯಲ್ಲಿ ಶೇ 60.94 ರಷ್ಟು ಪೂರ್ಣಗೊಂಡಿದೆ. ಈ ಪೈಕಿ ಮೆಕ್ಕೆಜೋಳ ಬೀಜ ಬಿತ್ತನೆಯು ಗರಿಷ್ಠ ಪ್ರಮಾಣದಲ್ಲಿ ಗುರಿ ಈಡೇರಿದೆ.
ಮೆಕ್ಕೆಜೋಳ, ಭತ್ತ, ರಾಗಿ, ಹತ್ತಿ, ಶೇಂಗಾ, ತೊಗರಿ, ಎಳ್ಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,96,454 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಈಗಾಗಲೇ 1,19,721 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.
ಜಿಲ್ಲೆಯ ಪ್ರಧಾನ ಬೆಳೆಯಾದ ಮೆಕ್ಕೆಜೋಳ ಬೀಜ ಬಿತ್ತನೆಗೆ ಈ ವರ್ಷ 1.20 ಲಕ್ಷ ಹೆಕ್ಟೇರ್ ವಿಸ್ತೀರ್ಣವನ್ನು ಗುರುತಿಸಲಾಗಿತ್ತು. ಈ ಪೈಕಿ 1.12 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಗೊಬ್ಬರ ಹಾಕುವುದು, ಎಡೆಕುಂಟೆ ಹೊಡೆಯುವುದು ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯಲ್ಲಿ 53,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಗೆ ಗುರಿ ಹೊಂದಲಾಗಿದೆ. ಸದ್ಯ ಭತ್ತ ಬಿತ್ತನೆ ಕಾರ್ಯ ಶುರುವಾಗಿಲ್ಲ. ಹೀಗಾಗಿ ಒಟ್ಟಾರೆ ಮುಂಗಾರು ಬಿತ್ತನೆ ಪ್ರಮಾಣದ ಗುರಿ ಸಾಧನೆಯಲ್ಲಿ ಕಡಿಮೆ ತೋರುತ್ತಿದೆ. ಭತ್ತ ಹೊರತಾಗಿ ಇನ್ನಿತರೆ ಬೆಳೆಗಳ ಪೈಕಿ ಉತ್ತಮ ಪ್ರಗತಿ ಕಂಡುಬಂದಿದೆ.
9,775 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಗೆ ಗುರಿ ಹೊಂದಲಾಗಿತ್ತು. ಈ ಪೈಕಿ 1,065 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. 2678 ಹೆಕ್ಟೇರ್‌ನಲ್ಲಿ ತೊಗರಿ (1,923 ಹೆಕ್ಟೇರ್ ಬಿತ್ತನೆ ಗುರಿ), 1,130 ಹೆಕ್ಟೇರ್‌ನಲ್ಲಿ ಶೇಂಗಾ (4,270 ಹೆಕ್ಟೇರ್ ಗುರಿ), 791 ಹೆಕ್ಟೇರ್‌ನಲ್ಲಿ ಹತ್ತಿ (1,873 ಹೆಕ್ಟೇರ್ ಗುರಿ) ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಮಳೆ ಕೊರತೆ ಇಲ್ಲ:
ಜಿಲ್ಲೆಯಲ್ಲಿ ಮುಂಗಾರುಪೂರ್ವ ಅವಧಿಯಲ್ಲಿ (ಮಾರ್ಚ್‌ನಿಂದ ಮೇ ವರೆಗೆ) 102 ಮಿ.ಮೀ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ವಾಸ್ತವದಲ್ಲಿ 170 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ 67 ರಷ್ಟು ಜಾಸ್ತಿ ಮಳೆಯಾಗಿದೆ. ಜೂನ್ ತಿಂಗಳಲ್ಲಿ 70 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ವಾಸ್ತವದಲ್ಲಿ 113 ಮಿ.ಮೀ. (ಶೇ 44 ರಷ್ಟು ಹೆಚ್ಚು) ಮಳೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಮಳೆಯ ಕೊರತೆ ಎದುರಾಗಿಲ್ಲ. ಹೀಗಾಗಿ ಬಿತ್ತನೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಿವೆ. ಬೀಜ, ಗೊಬ್ಬರ ಖರೀದಿಗೆ ರೈತರಿಗೆ ಸಮಸ್ಯೆಯಾಗದಂತೆ ನಿಭಾಯಿಸಲು ಕೃಷಿ ಇಲಾಖೆಯು 5 ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳನ್ನು ಆರಂಭಿಸಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಖರೀದಿಗೆ ರಿಯಾಯಿತಿಯೂ ಇದೆ. ಎಸ್‌ಸಿ, ಎಸ್‌ಟಿ ಸಮುದಾಯದ ರೈತರಿಗೆ ರಿಯಾಯಿತಿ ಪ್ರಮಾಣ ಜಾಸ್ತಿ ಇದೆ. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿಯೇ ಬೀಜ ಖರೀದಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.
ಜಗಳೂರು ತಾಲ್ಲೂಕಿನ ಕೆಲ ಗ್ರಾಮಗಳ ರೈತರು ಹಾವೇರಿಯ ರಾಣೇಬೆನ್ನೂರಿನಿಂದ ಖರೀದಿಸಿ ತಂದಿದ್ದ ಮೆಕ್ಕೆಜೋಳದ ಕಳೆಪೆ ಬೀಜಗಳನ್ನು ಬಿತ್ತಿದ್ದರು. ಅವು ಮೊಳಕೆಯೊಡೆಯದ ಕಾರಣ, ಮತ್ತೊಮ್ಮೆ ಬೇರೆಡೆ ಬೀಜಗಳನ್ನು ತಂದು ಬಿತ್ತನೆ ಮಾಡಿದ್ದಾರೆ ಎಂದು ರೈತರು ದೂರಿದರು.
‘ಪರ್ಯಾಯ ಬೆಳೆಯೇ ಪರಿಹಾರ’
ಮೆಕ್ಕೆಜೋಳ ಬೆಳೆಯಲ್ಲಿನ ಮುಳ್ಳು ಸಜ್ಜೆ (ಕಳೆ) ನಿರ್ಮೂಲನೆಗೆ ಸದ್ಯಕ್ಕೆ ಔಷಧಿ ಇಲ್ಲವಾಗಿದೆ. ರೈತರು ಮುಳ್ಳುಸಜ್ಜೆ ನಿವಾರಣೆಗೆ ತಾತ್ಕಾಲಿಕ ಪರಿಹಾರವಾಗಿ ಎಡೆಕುಂಟೆ ಹೊಡೆಯುತ್ತಿದ್ದಾರೆ. ಶಾಶ್ವತ ಪರಿಹಾರ ಪಡೆಯಲು ರೈತರು ಮೆಕ್ಕೆಜೋಳದ ಬದಲಾಗಿ ಪರ್ಯಾಯ ಬೆಳೆಗಳಾದ ತೊಗರಿ ಸೂರ್ಯಕಾಂತಿ ಸಜ್ಜೆ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ಸಲಹೆ ನೀಡಿದರು. ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಸೇರಿದಂತೆ ಇನ್ನಿತರ ರಸಗೊಬ್ಬರಗಳಿಗೆ ಜಿಲ್ಲೆಯಲ್ಲಿ ಕೊರತೆ ಇಲ್ಲ. ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಸಂಗ್ರಹಿಸಿಡಲಾಗಿದೆ. ರೈತರು ಯೂರಿಯಾ ಬದಲು ನ್ಯಾನೊ ಯೂರಿಯಾ ಹಾಗೂ ಡಿಎಪಿ ಬದಲು ಕಾಂಪ್ಲೆಕ್ಸ್ (ಸಂಯುಕ್ತ ರಸಗೊಬ್ಬರ) ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.