ADVERTISEMENT

ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ:ರಸ್ತೆ ತಡೆದು ರೈತರ ಪ್ರತಿಭಟನೆ

ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:14 IST
Last Updated 20 ನವೆಂಬರ್ 2025, 7:14 IST
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಬೆಲೆ ಕುಸಿತ ಕಂಡಿರುವ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು. ಕ್ವಿಂಟಲ್‌ಗೆ ₹ 3,400 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪಿ.ಬಿ. ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಮೆರವಣಿಗೆ ಹೊರಟ ರೈತರು, ಪಿ.ಬಿ. ರಸ್ತೆ, ಲಾಯರ್ ರಸ್ತೆದ ಮೂಲಕ ಜಯದೇವ ವೃತ್ತ ತಲುಪಿದರು. ಕೆಲಹೊತ್ತು ಧರಣಿ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಬಳಿಗೆ ಧಾವಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ರೈಲ್ವೆ ನಿಲ್ದಾಣದ ಮುಂಭಾಗದ ಪಿ.ಬಿ. ರಸ್ತೆಗೆ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ವಾಹನ ಸಂಚಾರ ತಡೆದರು. ರಸ್ತೆಯಲ್ಲಿಯೇ ಅಡುಗೆಗೆ ಸಿದ್ಧತೆ ನಡೆಸಿದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ADVERTISEMENT

‘ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ₹ 2,400 ಬೆಂಬಲ ಬೆಲೆ ಘೋಷಣೆ ಮಾಡಿದೆ. ಕಾನೂನು ಮಾನ್ಯತೆ ಇಲ್ಲದಿರುವ ಪರಿಣಾಮ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರವನ್ನು ತೆರೆದು ಬೆಂಬಲ ಬೆಲೆಯ ಜೊತೆಗೆ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹ 1,000 ಬೋನಸ್ ಘೋಷಣೆ ಮಾಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ ಆಗ್ರಹಿಸಿದರು.

‘ಭತ್ತಕ್ಕೆ ಬೆಂಬಲ ಬೆಲೆಯ ಜೊತೆಗೆ ₹ 500 ಬೋನಸ್‌ನ್ನು ತೆಲಂಗಾಣ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕತೆ ತೋರಬೇಕು. ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು. ಆಗ ರೈತರು ಹೋರಾಟ ಮಾಡುವುದು ತಪ್ಪುತ್ತದೆ’ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ದೇವೇಂದ್ರಪ್ಪ, ಮರಿಯಮ್ಮನಹಳ್ಳಿ ಪರಶುರಾಂ, ಚಿಕ್ಕಮಲ್ಲನಹೊಳೆ ಚಿರಂಜೀವಿ, ವಿ.ಎನ್. ಪ್ರಕಾಶ್, ಹೂವಿನಮಡು ನಾಗರಾಜ್ ಇದ್ದರು.

Highlights - ₹ 3,400 ದರ ನಿಗದಿಪಡಿಸಲು ಆಗ್ರಹ ರಸ್ತೆಯಲ್ಲೇ ಅಡುಗೆಗೆ ಸಿದ್ಧತೆ ನಡೆಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

ಕ್ವಿಂಟಲ್‌ ಮೆಕ್ಕೆಜೋಳಕ್ಕೆ ರಾಜ್ಯ ಸರ್ಕಾರ ₹ 3400 ದರ ಘೋಷಣೆ ಮಾಡಬೇಕು. ಇಲ್ಲವಾದರೆ ಜಿಲ್ಲಾ ಬಂದ್‌ ರಸ್ತೆ ತಡೆ ಚಳವಳಿಗೆ ಕರೆ ನೀಡಲಾಗುವುದು
ಹುಚ್ವವ್ವನಹಳ್ಳಿ ಮಂಜುನಾಥ್ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

ರೈತರ ಮನವೊಲಿಸಲು ಯತ್ನ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್‌. ಬಸವಂತಪ್ಪ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಜಿಲ್ಲೆಯ ಎಲ್ಲ ಶಾಸಕರು ಆಹಾರ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸಿ ನ್ಯಾಯಯುತ ಬೆಲೆ ದೊರಕಿಸಿಕೊಡುವ ಆಶ್ವಾಸನೆ ನೀಡಿದರು. ‘ರಾಜ್ಯ ಸರ್ಕಾರ ರೈತರ ಪರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇದೆ. ಹೋರಾಟವನ್ನು ಕೈಬಿಟ್ಟರೆ ಮಾತುಕತೆಗೆ ಅನುಕೂಲವಾಗುತ್ತದೆ’ ಎಂದು ಶಾಸಕರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.