
ಮಲೇಬೆನ್ನೂರು: ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ- 25ರ ಅಭಿವೃದ್ಧಿ ಕಾಮಗಾರಿ ನಡೆಯದ್ದರಿಂದ ವಾಹನ ಸವಾರರು ಹಾಗೂ ಸ್ಥಳೀಯರಿಗೆ ದಿನವೂ ದೂಳಿನ ಮಜ್ಜನವಾಗುತ್ತಿದೆ.
₹ 2 ಕೋಟಿ ಅಂದಾಜು ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ಸಿಕ್ಕಿದ್ದು, ಡಾಂಬರ್ ಹಾಕುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಳೆ ಕೂಡಾ ನಿಂತಿದೆ. ಆದರೆ ಗುತ್ತಿಗೆದಾರರು ಇನ್ನೂ ಕೆಲಸ ಆರಂಭಿಸಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಪಟ್ಟಣದ ಉತ್ತರ ಭಾಗದ ಕೆಇಬಿ, ವೀರಭದ್ರೇಶ್ವರ ದೇವಾಲಯ, ಪುರಸಭೆ ಕಚೇರಿ ಹಾಗೂ ದಕ್ಷಿಣದ ಭಾಗದ ಎಸ್‌ಬಿಐ, ಕೆಇಬಿ, ಜಲಸಂಪನ್ಮೂಲ ಇಲಾಖೆ ಕಚೇರಿ ಕಡೆಗಳಲ್ಲಿ ವಿದ್ಯಾರ್ಥಿಗಳು, ಜನ, ಜಾನುವಾರು ಸಂಚಾರ ಕಷ್ಟವಾಗಿದೆ. ರಸ್ತೆ ಬದಿಯ ಅಂಗಡಿಗಳು ಹಾಗೂ ಬೀದಿಬದಿ ವ್ಯಾಪಾರಿ ಮಳಿಗೆಗಳು ದೂಳುಮಯವಾಗಿವೆ.
ಮೂರ್ನಾಲ್ಕು ಬಾರಿ ವೆಟ್ ಮಿಕ್ಸ್ ತುಂಬಿ ಗುಂಡಿ ಮುಚ್ಚಿದ್ದರೂ ಪ್ರಯೋಜನ ಆಗಿಲ್ಲ. ಮೇಲ್ಪದರದ ಕಲ್ಲು ಕಿತ್ತುಬಂದಿವೆ. ರಸ್ತೆಯಲ್ಲಿ ಓಡಾಡುವವರು, ವಾಹನ ಸವಾರರು ಸಾಕಷ್ಟು ಪೆಟ್ಟು ತಿಂದಿದ್ದಾರೆ. ಕಾರ್, ಬಸ್‌ಗಳ ಗಾಜುಗಳಿಗೆ ಕಲ್ಲು ಸಿಡಿದು ಹಾನಿ ಸಂಭವಿಸಿದೆ ಎಂದು ಜನರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಹೊಂಡ, ಗುಂಡಿಗಳು ದೊಡ್ಡದಾಗಿವೆ. ಕಾಮಗಾರಿಯ ಗುತ್ತಿಗೆ ಪಡೆದವರು ಎರಡು ಪದರದ ಡಾಂಬರೀಕಣ ಮಾಡುವ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ತಡವಾಗಬಹುದು ಎಂದು ನಾಗರಿಕರು ಶಂಕೆ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಇಲಾಖೆಯ ಎಸ್‌ಇ, ಇಇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ದೊಡ್ಡ ಪ್ರಮಾಣದ ಹೊಂಡ, ಗುಂಡಿ ಬಿದ್ದಿರುವ ಸ್ಥಳ ಪರಿಶೀಲಿಸಿರುವುದನ್ನು ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಸ್ವಾಮಿ ದೃಢಪಡಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ‘ವಿವಿಧಡೆ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದೆ. ಎಂಜಿನಿಯರ್‌ಗಳು ಗುಂಡಿ ಮುಚ್ಚುವ ಭರವಸೆ ನೀಡಿದ್ದಾರೆ’ ಎಂದರು.
‘ಪಟ್ಟಣದಲ್ಲಿ ರಸ್ತೆ ಕಾಮಗಾರಿ ಕೆಲಸ ಒಂದು ವಾರದೊಳಗೆ ಮುಗಿಯಲಿದೆ’ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಭರವಸೆ ನೀಡಿದರು.
ಅಂದಾಜು ಪಟ್ಟಿ ಪರಿಷ್ಕರಣೆಗೆ ಮನವಿ
‘ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಿಸಿರುವ ರಸ್ತೆಯ ಮಟ್ಟವು ನಿಗದಿಗಿಂತ ಕೆಳಗಿದ್ದು ಮೋರಿಯೊಳಗೆ ನೀರು ಹರಿದು ಹೋಗುವುದಿಲ್ಲ. ಕಾಮಗಾರಿ ನಡೆಸಿದರೂ ಉಪಯೋಗವಿಲ್ಲ. ಅಂದಾಜು ಪಟ್ಟಿ ಸಮರ್ಪಕವಾಗಿಲ್ಲ. ರಸ್ತೆ ವಿಭಜಕ ನಿರ್ಮಿಸುವ ವಿಚಾರ ಅಂದಾಜು ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ. ಆದ್ದರಿಂದ ಅಂದಾಜು ಪಟ್ಟಿ ನವೀಕರಿಸಿ ಎಂದು ಎರಡು ಬಾರಿ ಲಿಖಿತವಾಗಿ ಕೋರಿದ್ದು ಎಂಜಿನಿಯರ್‌ಗಳ ಆದೇಶಕ್ಕೆ ಕಾಯುತ್ತಿದ್ದೇವೆ’ ಎಂದು ಗುತ್ತಿಗೆದಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.