ADVERTISEMENT

ಗುಂಡಿ ಬಿದ್ದ ರಸ್ತೆ: ‘ಬ್ಲಾಕ್‌ ಸ್ಪಾಟ್‌’ ಶ್ರೀರಕ್ಷೆ  

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:32 IST
Last Updated 14 ಡಿಸೆಂಬರ್ 2025, 7:32 IST
ಮಲೇಬೆನ್ನೂರು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರ ಬ್ಲಾಕ್‌ ಸ್ಪಾಟ್‌ ಯೋಜನೆ ಅಡಿ 1 ಕಿಮಿ ನಿರ್ಮಿಸುವ ಕುರಿತು ಕೆಶಿಪ್‌ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸುಪ್ರಿಯಾ, ಎಇಇ ಮರಿಸ್ವಾಮಿ ಹಾಗೂ ಶಾಸಕ ಬಿ.ಪಿ. ಹರೀಶ್‌ ಶನಿವಾರ ಚರ್ಚಿಸಿದರು.
ಮಲೇಬೆನ್ನೂರು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರ ಬ್ಲಾಕ್‌ ಸ್ಪಾಟ್‌ ಯೋಜನೆ ಅಡಿ 1 ಕಿಮಿ ನಿರ್ಮಿಸುವ ಕುರಿತು ಕೆಶಿಪ್‌ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸುಪ್ರಿಯಾ, ಎಇಇ ಮರಿಸ್ವಾಮಿ ಹಾಗೂ ಶಾಸಕ ಬಿ.ಪಿ. ಹರೀಶ್‌ ಶನಿವಾರ ಚರ್ಚಿಸಿದರು.   

ಮಲೇಬೆನ್ನೂರು: ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ– 25ರ 1 ಕಿ.ಮೀ ರಸ್ತೆ ಕಾಮಾಗಾರಿ ತುರ್ತಾಗಿ ಪೂರ್ಣಗೊಳಿಸಲು ಶನಿವಾರ ಶಾಸಕ ಬಿ.ಪಿ. ಹರೀಶ್‌ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸುಪ್ರಿಯಾ, ಎಇಇ ಮರಿಸ್ವಾಮಿ ಸ್ಥಳಕ್ಕೆ ಬಂದ ವೇಳೆ ರಸ್ತೆ ಹಾಳಾಗಿ ಉಂಟಾಗಿರುವ ಸಮಸ್ಯೆ ಕುರಿತು ವಿಷದವಾಗಿ ಚರ್ಚಿಸಿದರು.

ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಆರ್ಥಿಕ ಸಹಾಯದಿಂದ ಬ್ಲಾಕ್‌ ಸ್ಪಾಟ್‌ ಯೋಜನೆ ಅಡಿ ಈ ಕಾಮಗಾರಿ ಅನುಷ್ಠಾನ ಮಾಡಲಾಗುವುದು. ಪಟ್ಟಣದ ಉತ್ತರಭಾಗದ ಡಿವೈಡರ್‌ ಆರಂಭದಿಂದ ದಕ್ಷಿಣಭಾಗದವರೆಗೆ 1 ಕಿ.ಮೀ ವ್ಯಾಪ್ತಿಯಲ್ಲಿ 10 ಮೀಟರ್ ಅಗಲದ 2 ಪದರದ ರಸ್ತೆ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಕ್ಕೆಲಗಳ ಚರಂಡಿ, ಪಾದಚಾರಿ ರಸ್ತೆ ಹಾಗೂ 2 ಕಡೆ ಆಧುನಿಕ ದೀಪ ಅಳವಡಿಸಲಾಗುವುದು. ಮಾರ್ಚ್‌ 31ರೊಳಗಾಗಿ ಕಾಮಾಗಾರಿ ಮುಗಿಸಬೇಕಿದೆ’ ಎಂದು ಎಂಜಿನಿಯರ್‌ ತಿಳಿಸಿದರು.

ADVERTISEMENT

ನಾಗರಿಕರು ಪಟ್ಟಣದ ಮಧ್ಯ ಭಾಗದಲ್ಲಿ ಹಿಂದಿನಂತೆ ರಸ್ತೆ ವಿಭಜಕ ಅಳವಡಿಸಲು ಕೋರಿದರು. ಶಾಸಕರು ರಸ್ತೆ ವಿಭಜಕವನ್ನು ಯೋಜನೆಯಲ್ಲಿ ಸೇರಿಸಿಕೊಳ್ಳುವಂತೆ ಸೂಚಿಸಿದಾಗ ಎಂಜಿನಿಯರ್‌ಗಳು ಸಮ್ಮತಿಸಿದರು.

ಕೆ–ಶಿಪ್‌ ಸಲಹೆಗಾರ ಶಿವಾನಂದ, ಎಇ ಸೌಂದರ್ಯ, ಸ್ವತಂತ್ರ ಮೇಲ್ವಿಚಾರಕ ಎಂಜಿನಿಯರ್‌ ಲಿಯಾಸಾ, ಗುತ್ತಿಗೆದಾರ ಶ್ರೀನಿವಾಸ ರೆಡ್ಡಿ, ಪುರಸಭೆ ಸದಸ್ಯ ಸಿದ್ದೇಶ್‌, ಪಿಎಸ್‌ಐ ಹಾರೂನ್‌ ಅಖ್ತರ್‌, ನಾಗರಿಕರು ಇದ್ದರು.

2 ಕಾಮಗಾರಿ: ಈಗಾಗಲೇ ಕಳೆದ ವಾರವಷ್ಟೇ ಪಟ್ಟಣದ ವ್ಯಾಪ್ತಿಯಲ್ಲಿ 2.1 ಕಿ.ಮೀ ಡಾಂಬರೀಕರಣ ಕಾಮಗಾರಿಗೆ ಶಾಸಕ ಬಿ.ಪಿ. ಹರೀಶ್‌ ಚಾಲನೆ ನೀಡಿದ್ದರು. ಈ ಅದೇ ಸ್ಥಳದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣಕ್ಕೆ ಬ್ಲಾಕ್‌ ಸ್ಪಾಟ್‌ ಅಡಿ ಕೆ– ಶಿಪ್‌ ಯೋಜನೆ ರೂಪಿಸಿರುವುದು ವಿಶೇಷ. 

ಲೋಕೋಪಯೋಗಿ ಇಲಾಖೆ ಎಇಇ ಮಾಹಿತಿ ನೀಡಿ, ‘ಪಟ್ಟಣದ ಮಧ್ಯಭಾಗದ 1 ಕಿ.ಮೀ ರಸ್ತೆಯನ್ನು ಕೆ–ಶಿಪ್‌ನವರು ಅಭಿವೃದ್ಧಿಗೊಳಿಸಲಿದ್ದಾರೆ ಹಾಗೂ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿನ ರಸ್ತೆ ಅಭಿವೃದ್ಧಿಯನ್ನು ಹಳೆ ಯೋಜನೆಯಂತೆ ಆರ್‌ವಿಆರ್‌ ಸಂಸ್ಥೆ ಮಾಡಲಿದೆ ಎಂದು ತಿಳಿಸಿದರು.

Cut-off box - ಶಿಷ್ಟಾಚಾರದ ತಾಕೀತು ಕೆ– ಶಿಪ್‌ ಸಿಬ್ಬಂದಿ ಹಾಗೂ ಶಾಸಕರು ತೆರಳಿದ ನಂತರ ಮುಖ್ಯವೃತ್ತಕ್ಕೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಹರಿಹರ ತಾಲ್ಲೂಕು ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್‌ ಬಂದರು. ‘ಯೋಜನೆಯ ಅಧಿಕಾರಿಗಳು ಬರುವ ಕುರಿತು ತಮಗೆ ಮಾಹಿತಿ ಏಕೆ ನೀಡಿಲ್ಲ’ ಎಂದು ಎಇಇ ಮರಿಸ್ವಾಮಿ ಅವರಿಗೆ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿ ಅನುಷ್ಠಾನ ಮಾಡುವ ಮುನ್ನ ಶಿಷ್ಟಾಚಾರ ಪಾಲನೆ ಮಾಡುವಂತೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.